ಲಂಚ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದ ವೈದ್ಯ!

ತಾಮರಶ್ಶೇರಿ, ಜ.24: ಶಸ್ತ್ರಕ್ರಿಯೆ ನಡೆಸಲು ಮಹಿಳೆಯಿಂದ ಲಂಚ ಪಡೆಯುತ್ತಿದ್ದ ತಾಮರಶ್ಶೇರಿತಾಲೂಕು ಆಸ್ಪತ್ರೆಯ ಗೈನಾಲಜಿಸ್ಟ್ ಡಾ.ಕೆ.ಪಿ. ಅಬ್ದುಲ್ ರಶೀದ್ ಎಂಬಾತನನ್ನು ವಿಜಿಲೆನ್ಸ್ ಪೊಲೀಸರು ಬಂಧಿಸಿದ್ದಾರೆ.ಸೋಮವಾರ ಬೆಳಗ್ಗೆ 7:45ಕ್ಕೆ ವೈದ್ಯನ ಮನೆಯಲ್ಲಿರುವ ಕ್ಲಿನಿಕ್‌ನಲ್ಲಿ ರೋಗಿಗಳ ಆರೋಗ್ಯ ತಪಾಸಣೆ ವೇಳೆ ಲಂಚ ಪಡೆಯುತ್ತಿದ್ದಾಗ ಘಟನೆ ನಡೆದಿದೆ.
ಕಳೆದ ಹದಿನೆಂಟನೆ ತಾರೀಕಿಗೆ ಲಾಪ್ರೋಸ್ಕೋಪಿಕ್ ಶಸ್ತ್ರಕ್ರಿಯೆ ನಡೆಸಲಿಕ್ಕಾಗಿ ವೈದ್ಯರನ್ನು ಭೇಟಿಯಾದ ಮಹಿಳೆಗೆ 23 ತಾರೀಕಿಗೆ 2000ರೂಪಾಯಿಯೊಂದಿಗೆ ಬರಲು ಆತ ತಿಳಿಸಿದ್ದ. ನಂತರ ಮಹಿಳೆ ಪತಿ ವಿಜಿಲೆನ್ಸ್‌ಗೆ ದೂರು ನೀಡಿದ್ದರು. ವಿಜಿಲೆನ್ಸ್ ನೀಡಿದ್ದ ಫಿನೋಫ್ತಲಿನ್ ಪುಡಿ ಹಾಕಿದ 2000ರೂಪಾಯಿ ನೋಟನ್ನು ಸೋಮವಾರ ಬೆಳಗ್ಗೆ ಮಹಿಳೆ ವೈದ್ಯನಿಗೆ ತಂದು ಕೊಟ್ಟಿದ್ದರು. ಮಹಿಳೆಯ ತಪಾಸಣೆ ನಡೆಸಿದ ವೈದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಂತೆ ಬರೆದು ಕೊಟ್ಟಿದ್ದ. ಕೂಡಲೇ ಮಫ್ತಿಯಲ್ಲಿದ್ದ ಕಲ್ಲಿಕೋಟೆ ವಿಜಿಲೆನ್ಸ್ ಡಿವೈಎಸ್ಪಿ ಜೋಸಿ ಚೆರಿಯಾನ್ ನೇತೃತ್ವದ ಪೊಲೀಸರ ತಂಡ ತಪ್ಪಿತಸ್ಥ ವೈದ್ಯ ಡಾ.ಕೆ.ಪಿ. ಅಬ್ದುಲ್ ರಶೀದ್‌ನನ್ನು ಬಂಧಿಸಿದ್ದಾರೆಂದು ವರದಿತಿಳಿಸಿದೆ.





