ಬೀಡಿ ಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ನಗದು ರೂಪದಲ್ಲಿ ವೇತನ ನೀಡುವಂತೆ ಒತ್ತಾಯಿಸಿ ಧರಣಿ

ಮಂಗಳೂರು, ಜ.24: ಕರಾವಳಿಯ ಜೀವನಾಡಿಯಾಗಿರುವ ಬೀಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ನಗದು ರೂಪದಲ್ಲೇ ವೇತನ ನೀಡಬೇಕು ಎಂದು ಒತ್ತಾಯಿಸಿ ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ), ಎಚ್‌ಎಂಎಸ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಹಾಗೂ ದ.ಕ., ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್‌ದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾವಿರಾರು ಬೀಡಿ ಕಾರ್ಮಿಕರು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಅದಕ್ಕೂ ಮೊದಲು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ಕಾರ್ಮಿಕರು ರ್ಯಾಲಿ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿದ ಕಾರ್ಮಿಕ ಮುಖಂಡ ಮುಹಮ್ಮದ್ ರಫಿ ಮಾತನಾಡಿ, ಈ ಕೈಗಾರಿಕೆಯಲ್ಲಿ ಕರಾವಳಿ ಜಿಲ್ಲೆಯ ಸುಮಾರು 5 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನ.8ರಿಂದ ಅನ್ವಯವಾಗುವಂತೆ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬೀಡಿ ಕಾರ್ಮಿಕರು ಅತಂತ್ರಸ್ಥಿತಿಗೆ ತಲುಪಿದ್ದಾರೆ. ಬೀಡಿ ಕಾರ್ಮಿಕರಲ್ಲಿ ಶೇ.60ರಷ್ಟು ಮಂದಿ ಅನಕ್ಷರಸ್ಥರಾಗಿದ್ದಾರೆ. ಹೆಚ್ಚಿನವರಿಗೆ ಬ್ಯಾಂಕ್ ವ್ಯವಹಾರ ಮಾಡಿ ಗೊತ್ತಿಲ್ಲ. ನೋಟು ನಿಷೇಧಕ್ಕೆ ಮುನ್ನವೇ ಬೀಡಿ ಮಾಲಕರು ತಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದರೆ, ಬೀಡಿ ಕಾರ್ಮಿಕರು ಇನ್ನೂ ದಿನದೂಡಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದರು.
ಬೀಡಿ ಕಾರ್ಮಿಕರ ಸಂಕಷ್ಟವನ್ನು ಯಾವ ಜನಪ್ರತಿನಿಧಿಯೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ,ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತಿತರರು ಈ ಬಗ್ಗೆ ಗಮನಹರಿಸಬೇಕಾಗಿದೆ. ಇಲ್ಲದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.
ಎಚ್‌ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಪಿ.ಸಂಜೀವ, ಸೀತಾರಾಮ ಬೇರಿಂಜ ಮಾತನಾಡಿದರು.
ವೇದಿಕೆಯಲ್ಲಿ ಕೃಷ್ಣಪ್ಪ ತೊಕ್ಕೊಟ್ಟು, ಆಲಿಯಬ್ಬ, ಗಂಗಾಧರ ಶೆಟ್ಟಿ, ರವಿ, ಹಾಜಿ ಜಲೀಲ್ ಪುತ್ತೂರು, ಪದ್ಮಾವತಿ ಶೆಟ್ಟಿ, ಸರಸ್ವತಿ ಕಡೇಶಿವಾಲಯ, ಶರೀಫ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.







