ಜಲ್ಲಿಕಟ್ಟು ಕುರಿತ 2016ರ ಅಧಿಸೂಚನೆ ವಾಪಸ್ : ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ

ಹೊಸದಿಲ್ಲಿ,ಜ.24: ತಮಿಳುನಾಡು ಸರಕಾರವು ಹೊಸ ಶಾಸನವೊಂದನ್ನು ತಂದಿರುವ ಹಿನ್ನೆಲೆಯಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿ 2016,ಜ.6ರಂದು ತಾನು ಹೊರಡಿ ಸಿದ್ದ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳುವುದಾಗಿ ಕೇಂದ್ರವು ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು. ಸರಕಾರದ ನಿರ್ಧಾರವನ್ನು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ತಿಳಿಸಿದರು.
ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗೊಂಚಲು ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಲಯವು, ಸಂಬಂಧಿತ ಪೀಠವು ಕೇಂದ್ರದ ಅರ್ಜಿಯು ತನ್ನ ಪರಿಶೀಲನೆಗೆ ಬಂದಾಗ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದು ಹೇಳಿತು.
ಪ್ರಾಣಿಗಳಿಗೆ ಹಿಂಸೆ ತಡೆ (ತಮಿಳುನಾಡು ತಿದ್ದುಪಡಿ) ಕಾಯ್ದೆ,2017ನ್ನು ಸೋಮವಾರ ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ. ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿರುವ ನೂತನ ಶಾಸನವನ್ನು ಪ್ರಶ್ನಿಸಿ ಅರ್ಜಿಗಳಿದ್ದರೆ, ಅವುಗಳ ಪರಿಶೀಲನೆಯ ಮುನ್ನ ತಮ್ಮ ಅಹವಾಲುಗಳನ್ನು ಆಲಿಸಬೇಕು ಎಂದು ಕೋರಿ ಸುಮಾರು 70 ಕೇವಿಯಟ್‌ಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿವೆ.





