ಡಿವೈಎಫ್‌ಐ ಅಖಿಲ ಭಾರತ ಸಮ್ಮೇಳನಕ್ಕೆ ಸಂತೋಷ್ ಬಜಾಲ್, ಆಶಾ ಬೋಳೂರು ಆಯ್ಕೆ

ಮಂಗಳೂರು, ಜ. 24: ಡಿವೈಎಫ್‌ಐ ಹತ್ತನೆ ಅಖಿಲ ಭಾರತ ಸಮ್ಮೇಳನ ಫೆ. 2 ರಿಂದ 5 ರವರಗೆ ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಉದ್ಯೋಗ, ಜಾತ್ಯತೀತತೆ, ಪ್ರಜಾಪ್ರಭುತ್ವಕ್ಕಾಗಿ ಕನಸಿನ ಹೊಸ ಭಾರತ ಎಂಬ ಘೋಷಣೆಯ ಅಡಿಯಲ್ಲಿ ನಡೆಯಲಿರುವ ನಾಲ್ಕು ದಿನಗಳ ಸಮ್ಮೇಳನವನ್ನು ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲ ಗೌಡ ಉದ್ಘಾಟಿಸಲಿದ್ದಾರೆ.
ದೇಶದ ಎಲ್ಲಾ ರಾಜ್ಯಗಳಿಂದ ಆಯ್ಕೆಯಾದ ಐನೂರು ಯುವ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕದಿಂದ ಒಟ್ಟು ಹನ್ನೆರಡು ಪ್ರತಿನಿಧಿಗಳು ಆಯ್ಕೆಯಾಗಿದ್ದು ದ.ಕ. ಜಿಲ್ಲೆಯಿಂದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಯುವತಿಯರ ಉಪ ಸಮಿತಿಯ ಆಶಾ ಬೋಳೂರು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ದೇಶದ ಯುವ ಜನರ ಮುಂದಿರುವ ಸವಾಲು, ಉದ್ಯೋಗ ಅವಕಾಶಗಳು ಇಂಡಿಯಾದ ಜೀವಾಳವಾಗಿರುವ ಜಾತ್ಯತೀತತೆ, ಪ್ರಜಾಪ್ರಭುತ್ವದ ಮೇಲೆ ಮಾರುಕಟ್ಟೆ ಮೌಲ್ಯಗಳು, ಕೋಮುವಾದಿ ಶಕ್ತಿಗಳು ಉಂಟುಮಾಡುತ್ತಿರುವ ಆಕ್ರಮಣಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಿದೆ. ಹೊಸ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





