ಶೀಘ್ರವೇ ಮುದ್ದಣನ ಅಂಚೆಚೀಟಿ: ರಮೇಶ್ ಜಿಗಜಿಣಗಿ

ಉಡುಪಿ, ಜ.24: ಮುದ್ದಣನ ಅಂಚೆಚೀಟಿಯನ್ನು ಬಿಡುಗಡೆಗೊಳಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇನ್ನು ಕೆಲವೇ ಸಮಯದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವ ರಮೇಶ್ ಜಿಗಜಿಣಗಿ ಹೇಳಿದರು.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಂದಳಿಕೆ ಮುದ್ದಣ ಪ್ರತಿಷ್ಠಾನದ ವತಿಯಿಂದ ಇಂದು ಸಂಜೆ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ನಡೆದ ಕವಿ ಮುದ್ದಣನ 147ನೇ ಜನ್ಮಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಮುದ್ದಣ ಕನ್ನಡದ ಅಮರ ಕವಿ. ಆತನ ಸ್ಮರಣೆ ಚಿರಂತನವಾಗಿರಲಿ, ಅವರ ಎಲ್ಲಾ ಕೃತಿಗಳು ಕನ್ನಡಿಗರೆಲ್ಲರಿಗೂ ಲಭ್ಯವಾಗುವಂತಾಗಲಿ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಮುದ್ದಣ ಕರ್ನಾಟಕದ ಹೆಮ್ಮೆಯ ಕವಿ. ಕುಮಾರವ್ಯಾಸ ಹಾಗೂ ಲಕ್ಷ್ಮೀಶನ ಸಾಲಿನಲ್ಲಿ ಬರುವ ಶ್ರೇಷ್ಠ ಕವಿ ಇವರು. ಕೇವಲ 31ವರ್ಷದ ಬದುಕಿನಲ್ಲಿ ಇಷ್ಟೊಂದು ವೌಲ್ಯಯುತವಾದ ಕೃತಿಗಳನ್ನು ರಚಿಸಿರುವುದೇ ಇವರೊಂದು ಅದ್ಭುತ ಪ್ರತಿಭೆ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಪೇಜಾವರ ಸ್ವಾಮೀಜಿ ನುಡಿದರು.
ಉಡುಪಿ ಜಿಲ್ಲೆಯ ಕುಡಿಯುವ ನೀರು ಯೋಜನೆಗೆ 30 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಶೀಘ್ರವೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಗಜಿಣಗಿ ತಿಳಿಸಿದರು. ಮತ್ತೊಬ್ಬ ಮುಖ್ಯಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಹೊರತರಲಾದ ಮುದ್ದಣ ವಿರಚಿತ ‘ಕುಮಾರ ವಿಜಯ’ ಯಕ್ಷಗಾನ ಪ್ರಸಂಗಕ್ಕೆ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಬರೆದ ವ್ಯಾಖ್ಯಾನ ಗ್ರಂಥವನ್ನು ಹಾಗೂ ‘ಮುದ್ದಣ ಹೆಜ್ಜೆ ಗುರುತು-31’ ಕ್ಯಾಲೆಂಡರ್‌ನ್ನು ಪೇಜಾವರ ಶ್ರೀಗಳು ಹಾಗೂ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಡುಗಡೆಗೊಳಿಸಿದರು.
ವಿವಿಧ ಶಾಲೆಗಳಿಗೆ ಮುದ್ದಣ ಕೃತಿಗಳ ವಿತರಣೆಗೆ ಚಾಲನೆಯನ್ನೂ ನೀಡಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ನಂದಳಿಕೆ ಬಾಲಚಂದ್ರ ರಾವ್ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು, ಅಧ್ಯಕ್ಷ ಸುಂದರ್‌ರಾಮ್ ಬಂಗೇರ ವಂದಿಸಿದರು. ಪಿ.ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.







