ಇನ್ನೆಂದೂ ನಿಮಗೆ ಸುಳ್ಳು ಹೇಳುವುದಿಲ್ಲ !
ಟ್ರಂಪ್ ವಕ್ತಾರನಿಂದ ಪತ್ರಕರ್ತರಿಗೆ ಭರವಸೆ

ವಾಶಿಂಗ್ಟನ್, ಜ. 24: ತಾನು ಇನ್ನು ಮುಂದೆ ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪತ್ರಿಕಾ ಕಾರ್ಯದರ್ಶಿ ವರದಿಗಾರರಿಗೆ ಸೋಮವಾರ ಭರವಸೆ ನೀಡಿದ್ದಾರೆ.
ಟ್ರಂಪ್‌ರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಜನರ ಸಂಖ್ಯೆಯ ಬಗ್ಗೆ ಪತ್ರಿಕಾ ಕಾರ್ಯದರ್ಶಿ ನೀಡಿದ್ದ ಅತಿಶಯೋಕ್ತಿಯ ಮಾಹಿತಿಗಳು ಅಪಹಾಸ್ಯಕ್ಕೊಳಗಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಟ್ರಂಪ್‌ರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿದ್ದ ಜನರ ಸಂಖ್ಯೆ ಸಾರ್ವಕಾಲಿಕ ದಾಖಲೆಯಾಗಿತ್ತು ಎಂಬುದಾಗಿ ಶನಿವಾರ cದ ವಕ್ತಾರ ಸಿಯನ್ ಸ್ಪೈಸರ್ ಸುದ್ದಿಗಾರರಿಗೆ ಹೇಳಿದ್ದರು.
ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹಾಜರಾಗಿದ್ದ ಜನರ ಸಂಖ್ಯೆ, 2009ರಲ್ಲಿ ಬರಾಕ್ ಒಬಾಮ ಪ್ರಥಮ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಹಾಜರಾದ ಜನರ ಸಂಖ್ಯೆಗಿಂತ ಕಡಿಮೆಯಾಗಿತ್ತು ಎನ್ನುವುದನ್ನು ಚಿತ್ರಗಳು ತೋರಿಸಿವೆ.
‘ಪಕ್ಷಪಾತ ಪೂರಿತ’ ಮಾಧ್ಯಮವನ್ನು ಎದುರಿಸುವುದಕ್ಕಾಗಿ ‘ಪರ್ಯಾಯ ವಾಸ್ತವಾಂಶ’ಗಳನ್ನು ನೀಡಲು ಶ್ವೇತಭವನ ಬಯಸಿತ್ತು ಎಂಬುದಾಗಿ ಟ್ರಂಪ್ ಸಲಹೆಗಾರ್ತಿ ಕೆಲ್ಯಾನ್ ಕಾನ್ವೆ ರವಿವಾರ ಹೇಳಿರುವುದು ಮತ್ತಷ್ಟು ಟೀಕೆಗೆ ಕಾರಣವಾಯಿತು.
ಇದೇ ಹಿನ್ನೆಲೆಯಲ್ಲಿ, ಸ್ಪೈಸರ್ ಸೋಮವಾರ ಶ್ವೇತಭವನದಲ್ಲಿ ತನ್ನ ಮೊದಲ ಅಧಿಕೃತ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಆಗ, ‘‘ನಿಮ್ಮ ಈ ಸ್ಥಾನದಲ್ಲಿ ನಿಂತು ಯಾವತ್ತೂ ಸತ್ಯ ಹೇಳುವ ಉದ್ದೇಶವನ್ನು ನೀವು ಹೊಂದಿರುವಿರೇ?’’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು.
‘‘ನಮ್ಮ ಉದ್ದೇಶ ನಿಮಗೆ ಯಾವತ್ತೂ ಸುಳ್ಳು ಹೇಳದಿರುವುದು’’ ಎಂದು ಸ್ಪೈಸರ್ ಉತ್ತರಿಸಿದರು.ಸರಕಾರದ ನಿಲುವನ್ನು ನೀಡುವ ತನ್ನ ಹಕ್ಕನ್ನು ಅವರು ಸಮರ್ಥಿಸಿಕೊಂಡರು.‘‘ಪತ್ರಿಕೆಗಳೊಂದಿಗೆ ನಾನು ಆರೋಗ್ಯಕರ ಸಂಬಂಧವನ್ನು ಹೊಂದಲು ಬಯಸುತ್ತೇನೆ’’ ಎಂದು ಸ್ಪೈಸರ್ ಹೇಳಿದರು.
ದಕ್ಷಿಣ ಚೀನಾ ಸಮುದ್ರದಲ್ಲಿ ಹಿತಾಸಕ್ತಿ ರಕ್ಷಿಸಲು ಬದ್ಧ: ಅಮೆರಿಕವಾಶಿಂಗ್ಟನ್, ಜ. 24: ದಕ್ಷಿಣ ಚೀನಾ ಸಮುದ್ರದಲ್ಲಿನ ಅಮೆರಿಕ ಮತ್ತು ಅಂತಾರಾಷ್ಟ್ರೀಯ ‘ಹಿತಾಸಕ್ತಿ’ಗಳನ್ನು ರಕ್ಷಿಸುವುದಾಗಿ ಅಮೆರಿಕ ಚೀನಾಕ್ಕೆ ಎಚ್ಚರಿಕೆ ನೀಡಿದೆ ಹಾಗೂ ವ್ಯಾಪಾರ ಎನ್ನುವುದು ‘ದ್ವಿಮುಖ ಸಂಚಾರ’ದ ರಸ್ತೆಯಾಗಬೇಕು ಎಂದು ಹೇಳಿದೆ.
ಚೀನಾದ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳೆದಿರುವ ಕಠಿಣ ನಿಲುವಿನ ಸೂಚನೆ ನೀಡಿದ ಶ್ವೇತಭವನದ ವಕ್ತಾರ ಸಿಯನ್ ಸ್ಪೈಸರ್, ದಕ್ಷಿಣ ಚೀನಾ ಸಮುದ್ರದಲ್ಲಿನ ‘‘ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಅಮೆರಿಕ ಬದ್ಧವಾಗಿದೆ’’ ಎಂದರು.
‘‘ವಾಸ್ತವವಾಗಿ, ಆ ದ್ವೀಪಗಳು ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿದ್ದರೆ ಹಾಗೂ ಚೀನಾದ ಭಾಗವಾಗಿರದಿದ್ದರೆ, ಅಂತಾರಾಷ್ಟ್ರೀಯ ಹಿತಾಸಕ್ತಿಗಳನ್ನು ಒಂದು ದೇಶ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ರಕ್ಷಿಸುತ್ತೇವೆ’’ ಎಂದರು.
ದಕ್ಷಿಣ ಚೀನಾ ಸಮುದ್ರದ ಬಹುತೇಕ ಸಂಪೂರ್ಣ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕು ಚಲಾಯಿಸುತ್ತಿದೆ. ಬೇರೆ ದೇಶಗಳು ತಮ್ಮದೆಂದು ಹೇಳಿಕೊಳ್ಳುತ್ತಿರುವ ಜಲಪ್ರದೇಶಗಳೂ ತನ್ನದೆಂದು ಅದು ಹೇಳಿಕೊಳ್ಳುತ್ತಿದೆ.
ಶ್ವೇತಭವನದ ಸ್ಪಾನಿಶ್ ವೆಬ್‌ಸೈಟ್ ಮಾಯ: ಸ್ಪೇನ್ ಕಳವಳಬಾರ್ಸಿಲೋನ (ಸ್ಪೇನ್), ಜ. 24: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಶ್ವೇತಭವನದಲ್ಲಿದ್ದ ಸ್ಪಾನಿಶ್ ಭಾಷೆಯ ವೆಬ್‌ಸೈಟ್ ಮಾಯವಾಗಿದೆ ಎಂದು ಸ್ಪೇನ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ಲಕ್ಷಾಂತರ ಹಿಸ್ಪಾನಿಕ್ ಜನರು (ಸ್ಪೇನ್ ಮೂಲದವರು) ವಾಸಿಸುತ್ತಿರುವ ದೇಶವೊಂದರಲ್ಲಿ ವೆಬ್‌ಸೈಟನ್ನು ರದ್ದುಪಡಿಸುವುದು ‘ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅದು ಹೇಳಿದೆ.
ಆದರೆ, ಬಳಿಕ ಸ್ಪಷ್ಟೀಕರಣವೊಂದನ್ನು ನೀಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್, ವೆಬ್‌ಸೈಟನ್ನು ನವೀಕರಿಸಲಾಗುತ್ತಿದೆ ಅಷ್ಟೆ ಎಂದರು.
ವೆಬ್‌ಸೈಟ್‌ಗೆ ಮತ್ತೆ ಚಾಲನೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ವೆಬ್‌ಸೈಟನ್ನು ನಡೆಸುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಹೇಳಿದರು.







