ತುಳುನಾಡಿನ ಮೂಲಪುರುಷರ ಬೇಡಿಕೆ ಈಡೇರಿಕೆಗೆ ಪ್ರಯತ್ನ : ಗ ಸಚಿವ ಪ್ರಮೋದ್

ಉಡುಪಿ, ಜ.24: ತುಳುನಾಡಿನ ಮೂಲ ಪುರುಷರಾದ ನಲಿಕೆ, ಪಾಣ ಹಾಗೂ ಪಂಬದರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರ ಜೊತೆ ಚರ್ಚಿಸಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ತಿಂಗಳೆ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಆಯೋಜಿಸಲಾದ ತುಳುನಾಡ ಗರಡಿಗಳ ಎರಡನೆ ಮಹಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಜಗತ್ತಿನಲ್ಲೇ ಸರ್ವಶ್ರೇಷ್ಠವಾಗಿರುವ ತುಳುನಾಡಿನ ಸಂಸ್ಕೃತಿ, ಪರಂಪರೆಗಳು ಈ ಮಣ್ಣಿನ ಹಿರಿಮೆಯನ್ನು ಎತ್ತಿಹಿಡಿದಿವೆ. ಇದನ್ನು ಬೆಳೆಸಲು ತುಳುನಾಡಿನ ಎಲ್ಲಾ ಸಮುದಾಯಗಳ ಕೊಡುಗೆ ಅಪಾರ. ನಲಿಕೆ, ಕೊರಗ ಸಮುದಾಯಗಳೇ ಇಲ್ಲಿನ ಮೂಲ ಪುರಷರಾಗಿದ್ದು, ಜೀವನ ಪರ್ಯಂತ ದೈವಾರಾಧನೆ ಕಾರ್ಯದಲ್ಲೇ ತೊಡಗಿಸಿಕೊಂಡಿದ್ದಾರೆ. ಅಂದಿನ ಕಾಲ ದಲ್ಲಿದ್ದ ಅವರ ಸ್ಥಾನಮಾನ ಮತ್ತೆ ದೊರೆಯವಂತೆ ಮಾಡಬೇಕಾಗಿದೆ ಎಂದರು. ಸಮ್ಮೇಳನಾಧ್ಯಕ್ಷ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಭೂತ ಎಂಬ ಪದಕ್ಕೆ ಹಲವು ನಕಾರಾತ್ಮಕ ಅರ್ಥಗಳಿರುವುದರಿಂದ ತುಳುನಾಡಿನಲ್ಲಿ ನಡೆಯುವ ದೈವಾ ರಾಧನೆಗೆ ಭೂತಾರಾದನೆ ಎಂಬ ಪದವನ್ನು ಬಳಕೆ ಸರಿಯಲ್ಲ. ಇತಿಹಾಸ, ಸತ್ಯವನ್ನು ತಿರುಚಿ ಮುನ್ನಡೆಯಬಾರದು. ಇದು ನಮ್ಮ ಮಣ್ಣಿಗೆ ಎಸಗುವ ಅಪಚಾರ ಎಂದು ತಿಳಿಸಿದರು.
ದೈವಾರಾಧನೆ ಹಾಗೂ ದೇವಾರಾಧನೆಯ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಅದನ್ನು ನಾವು ತಿಳಿದುಕೊಳ್ಳಬೇಕು. ದೈವಾರಾಧನೆ ಜನಪದೀಯ ಚಿಂತನೆ ಯಾಗಿದೆ. ಆದುದರಿಂದ ಅಷ್ಟಮಂಗಳ ಎಂಬುದು ದೈವಗಳಿಗೆ ನಡೆಯುವ ಕಾರ್ಯವಲ್ಲ. ಅದರಲ್ಲಿ ವೈದಿಕ ವಿಧಾನಗಳಿವೆ. ಬ್ರಹ್ಮಕಲಶ ಎಂಬ ಪದ ದೇವಸ್ಥಾನಗಳಿಗೆ ಹಾಗೂ ಜೀರ್ಣೋದ್ದಾರ ಎಂಬ ಪದ ದೈವಸ್ಥಾನಗಳಿಗೆ ಬಳಸುವ ಪದ. ಈ ನಿಟ್ಟಿನಲ್ಲಿ ಜನಪದೀಯ ಮತ್ತು ಶಾಸ್ತ್ರೀಯವಾದ ಚೌಕಟ್ಟನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಹಂಪಿ ಕನ್ನಡ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಎ.ಶ್ರೀಧರ್ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ದೈವಾರಾದನೆಯ ಉಮೇಶ್ ಪಂಬದ ಮಂಗಳೂರು, ಲಕ್ಷ್ಮಣ ಪರವ ಕಾಪು, ನಾರಾಯಣ ಪಾಣ ಎಲ್ಲೂರು, ಲೀಲಾ ಶೆಡ್ತಿ ಮಾಳ, ಕೊರಗ ಪಾಣ, ಗುುವ ಅವರನ್ನು ಸನ್ಮಾನಿಸಲಾಯಿತು.
ಸ್ವಾಗತ ಸಮಿತಿಯ ಸಂಚಾಲಕ ತಿಂಗಳೆ ವಿಕ್ರಮಾರ್ಜನ ಹೆಗ್ಡೆ, ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಮುಂಬಯಿ ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಮಹಿಳಾ ಪ್ರಮುಖ ಶೀಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







