ಬಿಜೆಪಿ ಜೊತೆ ಶಿವಸೇನೆ ಮೈತ್ರಿ: 26ರಂದು ನಿರ್ಧಾರ
ಉದ್ಧವ್ ಠಾಕ್ರೆ ಘೋಷಣೆ

ಮುಂಬೈ, ಜ.24: ಪ್ರಧಾನಿ ನರೇಂದ್ರ ಮೋದಿ ಜಾಹೀರಾತುಗಳಿಗಾಗಿ ಖರ್ಚು ಮಾಡುವ ಹಣವನ್ನು ಅಭಿವೃದ್ಧಿಗೆ ಬಳಕೆಯಾಗುವ ನಿಧಿಗಳಿಗಾಗಿ ಬಳಸಿಕೊಳ್ಳಬೇಕೆಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರ 91ನೆ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಸಮಾರಂಭವೊಂದರಲ್ಲಿ ಪಾಲೊಂಡಿದ್ದ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬಿಜೆಪಿ ಜೊತೆಗಿನ ಮೈತ್ರಿಯ ಕುರಿತ ತನ್ನ ನಿಲುವನ್ನು ಜನವರಿ 26ರಂದು ನಡೆಯಲಿರುವ ಪಕ್ಷದ ಮಹಾಸಭೆಯಲ್ಲಿ ಘೋಷಿಸುವುದಾಗಿ ಹೇಳಿದರು.
‘‘ ಚುನಾವಣಾ ಪ್ರಚಾರಕ್ಕೆ ಎಷ್ಟು ಹಣ ಖರ್ಚಾಗಿದೆಯೆಂದು ಕೆಲವರು ನನ್ನನ್ನು ಕೇಳಿದ್ದರು. ಅದಕ್ಕೆ ನಾನು, ಅದೇನೇ ಇರಲಿ, ತಾನು ವೆಚ್ಚ ಮಾಡಿದ ಹಣವು, ಪ್ರಧಾನಿ ತನ್ನ ಜಾಹೀರಾತುಗಳಿಗೆ ವ್ಯಯಿಸಿದ್ದಕ್ಕಿಂತ ತುಂಬಾ ಕಡಿಮೆಯೆಂದು ಹೇಳಿದ್ದೆ’’ ಎಂದು ಉದ್ಘವ್ ತಿಳಿಸಿದರು. ಜನರಿಗೆ ಮುಖವನ್ನು ತೋರಿಸಲು ಹಣವನ್ನು ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಬದಲಿಗೆ ಅದನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂದು ಉದ್ಧವ್ ಅಭಿಪ್ರಾಯಿಸಿದರು.
ಚುನಾವಣಾ ಸಮಯದಲ್ಲಿ ಜನರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವುದನ್ನು ಪ್ರಸ್ತಾಪಿಸಿದ ಅವರು, ‘‘ನನ್ನಲ್ಲಿ ಹಾಗೂ ನನ್ನ ನಾಯಕತ್ವದಲ್ಲಿ ನಂಬಿಕೆಯಿಲ್ಲದವರು ಪಕ್ಷವನ್ನು ತೊರೆಯಲು ಮುಕ್ತರು’’ ಎಂದು ಕಟಕಿಯಾಡಿದರು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬಗ್ಗೆ ಮನ ಸೆಳೆದ ಅವರು ‘‘ ಇದೊಂದು ನಿರ್ಣಾಯಕ ಸಮಯವಾಗಿದೆ. ಶಿವಸೈನಿಕರು ನನ್ನ ಜೊತೆಗಿರುವಾಗ ಫಲಿತಾಂಶದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ರಾಜಕಾರಣಿಗಳು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆಂದು ಹೇಳಿದ ಉದ್ಧವ್, ದೇಶವನ್ನು ಮತ್ತು ಸಮಾಜವನ್ನು ಸುಭದ್ರವಾಗಿಡಲು ಹಿಂದುಗಳು ಒಗ್ಗಟ್ಟಾಗುವಂತೆ ಕರೆ ನೀಡಿದರು.
ಸುಪ್ರೀಂಕೋರ್ಟ್ ಜಲ್ಲಿಕಟ್ಟುಗೆ ವಿಧಿಸಿದ್ದ ನಿಷೇಧವನ್ನು ತಮಿಳುನಾಡು ಸರಕಾರವು ಸುಗ್ರೀವಾಜ್ಞೆ ಮೂಲಕ ರದ್ದುಪಡಿಸಿರುವ ಬಗ್ಗೆ ಗಮನಸೆಳೆದ ಅವರು, ಜನರು ಒಗ್ಗಟ್ಟಾದರೆ ಸುಪ್ರೀಂಕೋರ್ಟ್ ಆದೇಶವನ್ನು ಕೂಡಾ ಹಿಂಪಡೆಯಬಹುದೆಂಬುದನ್ನು ತಮಿಳುನಾಡಿನ ಜನತೆ ತೋರಿಸಿಕೊಟ್ಟಿದ್ದಾರೆ’’ ಎಂದು ಪ್ರಶಂಸಿಸಿದರು.







