ಬಾಂಗ್ಲಾ: ಸಿಡಿಲ ಆಘಾತದಿಂದ ಜನರ ಸಾವನ್ನು ನಿಲ್ಲಿಸಲು 10 ಲಕ್ಷ ತಾಳೆ ಮರ

ಢಾಕಾ, ಜ. 24: ಪ್ರತಿ ವರ್ಷ ನೂರಾರು ಜನರು ಸಿಡಿಲು ಬಡಿದು ಸಾಯುವುದನ್ನು ತಪ್ಪಿಸಲು ದೇಶಾದ್ಯಂತ 10 ಲಕ್ಷ ತಾಳೆ ಮರಗಳನ್ನು ನೆಡುವ ಕಾರ್ಯವನ್ನು ಬಾಂಗ್ಲಾದೇಶ ಆರಂಭಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಬಾಂಗ್ಲಾದೇಶದ ಅಧಿಕಾರಿಗಳು ಕಳೆದ ವರ್ಷ ಸಿಡಿಲು ಬಡಿತವನ್ನು ಪ್ರಾಕೃತಿಕ ವಿಕೋಪವೆಂದು ಘೋಷಿಸಿದ್ದರು. 2016ರಲ್ಲಿ ದೇಶದಲ್ಲಿ 200ಕ್ಕಿಂತಲೂ ಅಧಿಕ ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ ಒಂದೇ ದಿನದಲ್ಲಿ 82 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
ತಾಳೆ ಮರಗಳು ಸಿಡಿಲು ಬಡಿಯುವುದನ್ನು ತಡೆಗಟ್ಟುತ್ತವೆ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ.
ಮರಗಳ ಕೊಂಬೆಗಳು ಸಿಡಿಲು ಬಡಿತದ ಆಘಾತವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ಪರಿಣತರು ಹೇಳುತ್ತಾರೆ. ಮರಗಳ ಕೊರತೆಯೇ ಅಧಿಕ ಪ್ರಮಾಣ ಸಾವುಗಳಿಗೆ ಕಾರಣ ಎಂದು ಅವರು ಅಭಿಪ್ರಾಯಪಡುತ್ತಾರೆ.
ಥಾಯ್ಲೆಂಡ್‌ನಲ್ಲಿ ಜಾರಿಗೆ ಬಂದಿರುವ ಇಂಥದೇ ಕಾರ್ಯಕ್ರಮವೊಂದು ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Next Story







