ಪ.ಬಂಗಾಳ: ಉದ್ರಿಕ್ತ ಗುಂಪಿನಿಂದ ಇಬ್ಬರು ಅಮಾಯಕರ ಹತ್ಯೆ, ಮಹಿಳೆಯರಿಬ್ಬರಿಗೆ ಥಳಿತ

ಕೋಲ್ಕತಾ,ಜ.24: ಢಕಾಯಿತಿ,ಮಕ್ಕಳ ಅಪಹರಣ ಹಾಗೂ ಅತ್ಯಾಚಾರದ ಘಟನೆಗಳು ನಡೆದಿರುವುದಾಗಿ ಜಾಲತಾಣಗಳಲ್ಲಿ ಹುಸಿ ವದಂತಿಗಳನ್ನು ಹರಡಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವವರ ವಿರುದ್ಧ ಎಚ್ಚರಿಕೆ ವಹಿಸುವಂತೆ ಪಶ್ಚಿಮಬಂಗಾಳ ಪೊಲೀಸರು ರಾಜ್ಯದಾದ್ಯಂತ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಕರೆ ನೀಡುತ್ತಿದ್ದಾರೆ. ಇಂತಹ ಹುಸಿವದಂತಿಗಳನ್ನು ನಂಬಿ, ಉದ್ರಿಕ್ತ ಗುಂಪುಗಳು ಇಬ್ಬರನ್ನು ಹೊಡೆದು ಸಾಯಿಸಿದ್ದು, ಇಬ್ಬರು ಮಹಿಳೆಯರನ್ನು ಧಾರುಣವಾಗಿ ಥಳಿಸಿವೆ. ಗುಂಪಿನಿಂದ ಹಲ್ಲೆಗೊಳಗಾದವರಲ್ಲಿ ಒಬ್ಬಾಕೆ 70 ವರ್ಷ ವಯಸ್ಸಿನ ಅನಿವಾಸಿ ಭಾರತೀಯರಾಗಿದ್ದಾರೆ.
ಮಕ್ಕಳ ಅಪಹರಣ, ಅತ್ಯಾಚಾರ ಇತ್ಯಾದಿ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಈವರೆಗೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದು, ಅವರಲ್ಲೊಬ್ಬ 12 ವರ್ಷದ ವಿದ್ಯಾರ್ಥಿಯೂ ಇದ್ದಾನೆ. ಆತ ತನ್ನ ಮೊಬೈಲ್‌ಫೋನ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪ್ರಚೋದನಕಾರಿ ಸಂದೇಶಗಳನ್ನು ಹರಡಿದ್ದನೆನ್ನಲಾಗಿದೆ.
ಹುಸಿವದಂತಿಗಳ ಹಿನ್ನೆಲೆಯಲ್ಲಿ ರಾಜ್ಯದ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ.ಬಂಗಾಳ ಡಿಜಿಪಿ ಸುರ್ಜಿತ್ ಕಾರ್ ಪುರಕಾಯಸ್ಥ ಅವರು ಮಂಗಳವಾರ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ‘‘ ಕೆಲವು ಮುಸುಕುಧಾರಿಗಳು ನಿರ್ದಿಷ್ಟ ಪ್ರದೇಶಗಳಲ್ಲಿ ದರೋಡೆ, ಅತ್ಯಾಚಾರ ಅಥವಾ ಶಿಶು ಅಪಹರಣ ಕೃತ್ಯಗಳನ್ನು ನಡೆಸುತ್ತಿದ್ದಾರೆಂಬ ವದಂತಿಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ. ಬುರ್ಧ್ವಾನ್‌ನಲ್ಲಿ ಮಕ್ಕಳ ಹಂತಕನೆಂಬ ಶಂಕೆಯಲ್ಲಿ ಓರ್ವನನ್ನು ಥಳಿಸಿ ಕೊಂದ ಘಟನೆಯ ಬಳಿಕ ಉದ್ವಿಗ್ನ ಪರಿಸ್ಥಿತಿಯುಂಟಾಗಿ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿತ್ತು. ಆ ದಿನವೇ ಕೋಲ್ಕತಾ ವಿಮಾನನಿಲ್ದಾಣದ ಸಮೀಪ ಭಿಕ್ಷುಕನೊಬ್ಬನನ್ನು ಹೊಡೆದು ಸಾಯಿಸಲಾಗಿತ್ತು.
ಹೂಗ್ಲಿಯಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಪರ್ಣಾ ಘೋಷ್ ಎಂಬ ಮಹಿಳೆ ಹಾಗೂ ಅರ ಎನ್‌ಆರ್‌ಐ ತಾಯಿ, ದಾರಿಯನ್ನು ಕೇಳಿದಾಗ, ಅನುಮಾನಗೊಂಡ ಗುಂಪೊಂದು ಅವರನ್ನು ಹಿಗ್ಗಾಮಗ್ಗಾ ಥಳಿಸಿ, ಅವರಲ್ಲಿದ್ದ ನಗ,ನಗದನ್ನು ದೋಚಿತ್ತು ಮತ್ತು ಲೈಂಗಿಕ ಕಿರುಕುಳ ನೀಡಿತ್ತು. ಗುಂಪು ಕಾರಿನೊಂದಿಗೆ ಇವರಿಬ್ಬರನ್ನು ಜೀವಂತ ಸುಡಲು .ಯತ್ನಿಸಿದಾಗ, ಸ್ಥಳಕ್ಕೆ ಧಾವಿಸಿದ ಪೊಲೀಸರು ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದರೆಂದು ಮೂಲಗಳು ತಿಳಿಸಿವೆ.







