ಐಐಎಂ ವಿಧೇಯಕಕ್ಕೆ ಕೇಂದ್ರ ಸಂಪುಟ ಅಸ್ತು

ಹೊಸದಿಲ್ಲಿ, ಜ.24: ಮಹತ್ವದ ಭಾರತೀಯ ಮ್ಯಾನೇಜ್‌ಮೆಂಟ್ ಶಿಕ್ಷಣಸಂಸ್ಥೆ (ಐಐಎಂ) ವಿಧೇಯಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಭೆಯು ತನ್ನ ಅನುಮೋದನೆ ನೀಡಿದೆ. ಈ ವಿಧೇಯಕ ಜಾರಿಗೊಂಡಲ್ಲಿ ಐಐಎಂಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲು ಸಾಧ್ಯವಾಗಲಿದೆ. ಅಲ್ಲದೆ ಈ ಶಿಕ್ಷಣಸಂಸ್ಥೆಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಿಸಲಾಗುವುದು.
ಕೇಂದ್ರ ಸಂಪುಟದ ಅನುಮೋದನೆ ದೊರೆತಿರುವುದರಿಂದ ವಿಧೇಯಕವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಮುಂದೆ ಮಂಡಿಸಲಾಗುವುದು.
ಪ್ರಸ್ತುತ ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಎಂಬಿಎ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ. ಈವರೆಗೆ ಅವು ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಮ್ಯಾನೇಜ್ ಮೆಂಟ್ ಫೆಲೊ ಪ್ರೋಗ್ರಾಂ ಪ್ರಮಾಣಪತ್ರಗಳನ್ನು ಮಾತ್ರ ನೀಡುತ್ತಿದ್ದವು.
ಈ ಶೈಕ್ಷಣಿಕ ಬಿರುದುಗಳು, ಎಂಬಿಎ ಹಾಗೂ ಪಿಎಚ್‌ಡಿಗೆ ತತ್ಸಮಾನನವೆಂದು ಪರಿಗಣಿಸಲಾಗಿದ್ದರೂ, ಅವು ಸಾರ್ವತ್ರಿಕವಾಗಿ ಮಾನ್ಯತೆಯನ್ನು ಪಡೆದಿರಲಿಲ್ಲ. ಈ ವಿಧೇಯಕವು ಐಐಎಂಗಳಿಗೆ ಸಮರ್ಪಕ ಉತ್ತರದಾಯಿತ್ವದೊಂದಿಗೆ ಸಂಪೂರ್ಣ ಸ್ವಾಯತ್ತೆಯನ್ನು ನೀಡಲಿದೆಯೆಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.







