ಶಿಳ್ಳೆಕ್ಯಾತ ಸಮುದಾಯದ ಪ್ರತಿ ಕುಟುಂಬಕ್ಕೆ 2 ಎಕರೆ ಭೂಮಿ: ಎಚ್.ಆಂಜನೇಯ

ಬೆಂಗಳೂರು, ಜ.24: ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಪ್ರತಿ ಕುಟುಂಬಕ್ಕೆ ಎರಡು ಎಕರೆ ಕೊಡಲು ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಮಂಗಳವಾರ ರಾಜ್ಯ ಶಿಳ್ಳೆಕ್ಯಾತಾಸ್ ಜನಾಂಗಾಭಿವೃದ್ಧಿ ವೇದಿಕೆ ನಗರದ ಯಡಿಯೂರು ಸಮುದಾಯದ ಭವನದಲ್ಲಿ ಆಯೋಜಿಸಿದ್ದ ಶಿಳ್ಳೆಕ್ಯಾತ ಸಮುದಾಯದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಸೌಲಭ್ಯಗಳನ್ನು ಕೇವಲ ಮಾದಿಗ, ಹೊಲೆಯ, ಭೋವಿ ಸಮುದಾಯಗಳೇ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಳಿದ 98 ಜಾತಿಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದನ್ನು ಸರಿತೂಗಿಸುವ ನಿಟ್ಟಿನಲಿ ಅಲೆಮಾರಿ ಸಮುದಾಯಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಸರಕಾರ ಬದ್ಧವಿದೆ ಎಂದು ಅವರು ತಿಳಿಸಿದರು.
ಅಲೆಮಾರಿ ಸಮುದಾಯ ಇತರೆ ಸಮುದಾಯಗಳೊಂದಿಗೆ ಘನತೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತಾ ಸಮುದಾಯ ಸೇರಿದಂತೆ ಎಲ್ಲ ಅಲೆಮಾರಿ ಸಮುದಾಯಗಳಿಗೂ ಎರಡು ಎಕರೆ ಜಮೀನು ಹಾಗೂ ಗಂಗಾ-ಕಲ್ಯಾಣ ಯೋಜನೆಯ ಮುಖಾಂತರ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಅಲೆಮಾರಿ ಸಮುದಾಯಗಳನ್ನು ಒಂದು ನಿರ್ದಿಷ್ಟವಾದ ಪ್ರದೇಶದಲ್ಲಿ ನೆಲೆಸುವಂತೆ ಮಾಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದಲೆ ಮನೆಗಳನ್ನು ಕಟ್ಟಿಸಿಕೊಡಲು ಸುಮಾರು 200ಕೋಟಿ ರೂ.ವನ್ನು ಮೀಸಲಿರಿಸಲಾಗಿದೆ. ಇದು ಯಶಸ್ವಿಯಾಗುವಂತೆ ಅಲೆಮಾರಿ ಸಮುದಾಯಗಳ ಸಂಘ, ಸಂಸ್ಥೆಗಳು ತಮ್ಮ ಸಮುದಾಯದವರಿಗೆ ಸರಕಾರಿ ಸೌಲಭ್ಯಗಳನ್ನು ತಲುಪಿಸಲು ಮುಂದಾಗಬೇಕು ಎಂದು ಸಚಿವ ಆಂಜನೇಯ ತಿಳಿಸಿದರು..
ಶಿಕ್ಷಣದಿಂದ ಮಾತ್ರ ಶೋಷಿತರ ಅಭಿವೃದ್ಧಿ ಸಾಧ್ಯವೆಂದು ಡಾ.ಬಿ.ಆರ್.ಅಂಬೇಡ್ಕರ್ ಬಲವಾಗಿ ನಂಬಿದ್ದರು. ಹೀಗಾಗಿ ಅವರು ಸಂವಿಧಾನದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಸೌಲಭ್ಯವನ್ನು ಅಲೆಮಾರಿ ಸಮುದಾಯ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸರಕಾರಿ ಶಿಕ್ಷಣ ಸಂಸ್ಥೆಗಳಾದ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಯಿಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಆ ಮೂಲಕ ಅಲೆಮಾರಿ ಸಮುದಾಯದ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವೀರಭದ್ರೇಶ್ವರ ಲೀಲಾಮಠದ ಕಲ್ಲೀನಾಥ ಸ್ವಾಮೀಜಿ, ಶಿಳ್ಳೇಕ್ಯಾತಾಸ್ ಜನಾಂಗಾಭಿವೃದ್ದಿ ವೇದಿಕೆಯ ಅಧ್ಯಕ್ಷ ನರಸಿಂಹಯ್ಯ, ಕಾರ್ಯದರ್ಶಿ ಬಿ.ಎಚ್.ಮಂಜುನಾಥ ಮತ್ತಿತರರಿದ್ದರು.
ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ನಿರ್ಮಾಣಕ್ಕೆ ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ವೀರಭದ್ರೇಶ್ವರ ಲೀಲಾಮಠದ ಕಲ್ಲೀನಾಥ ಸ್ವಾಮೀಜಿಗೆ ಸುಮಾರು 50ಲಕ್ಷ ರೂ. ಕೊಡಲಾಗುವುದು. ಇದನ್ನು ಬಳಸಿಕೊಂಡು ತಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ ವುುಂದೆ ತರಬೇಕು.
-ಎಚ್.ಆಂಜನೇಯ ಸಚಿವ, ಸಮಾಜ ಕಲ್ಯಾಣ ಇಲಾಖೆ
ಹಕ್ಕೊತ್ತಾಯಗಳು
-ತೊಗಲುಗೊಂಬೆ ಕಲೆ ಉಳಿಸುವ ನಿಟ್ಟಿನಲ್ಲಿ ಅಧ್ಯಯನ ಹಾಗೂ ತರಬೇತಿ ಕೇಂದ್ರ ಸ್ಥಾಪನೆ.
-ಶಿಳ್ಳೇಕ್ಯಾತಾಸ್ ಅಭಿವೃದ್ದಿ ನಿಗಮ ಸ್ಥಾಪನೆ ಾಗೂ ಸ್ವ ಉದ್ಯೋಗಕ್ಕೆ ಧನಸಹಾಯ
-ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತೊಗಲುಗೊಂಬೆ ಕಲೆಯಲ್ಲಿರುವ ಕಲಾಕಾರರಿಗೆ ಪ್ರೋತ್ಸಾಹಧನ ನೀಡುವುದು.
-ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿ ನಿರ್ವಹಣೆಯಲ್ಲಿ ತಾಲೂಕು, ಜಿಲ್ಲೆ ಹಾಗೂ ಪಟ್ಟಣ ಪಂಚಾಯತ್ ಪುರಸಭೆಗಳಲ್ಲಿ ಆದ್ಯತೆ ನೀಡಬೇಕು.







