ಬಿಜೆಪಿಗೆ ಬಹುಮತ ದೊರೆತಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ : ಉ.ಪ್ರ.ಬಿಜೆಪಿ ಅಧ್ಯಕ್ಷ ಮೌರ್ಯ ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ,ಜ.24: ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರವು ಕಾವೇರಿರುವಂತೆಯೇ, , ಬಿಜೆಪಿಯು ಅಯೋಧ್ಯೆ ರಾಮಮಂದಿರ ವಿವಾದವನ್ನು ಕೆದಕಿಹಾಕಿದ್ದು, ಬಿಜೆಪಿಗೆ ನಿಚ್ಚಳ ಬಹುಮತ ದೊರೆತಲ್ಲಿ ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣಗೊಳ್ಳಲಿದೆಯೆಂದು ಅದು ಹೇಳಿದೆ.
ರಾಮಮಂದಿರವು ನಂಬಿಕೆಗೆ ಸಂಬಂಧಿಸಿ ವಿಷಯವಾಗಿದೆ. ಅದನ್ನು ಎರಡು ತಿಂಗಳುಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಚುನಾವಣೆಯ ಆನಂತರ ದೇವಾಲಯವು ನಿರ್ಮಾಣವಾಗಲಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅದಿಕಾರಕ್ಕೇರಲಿದೆಯೆಂದು, ಉತ್ತರಪ್ರದೇಶ ಬಿಜೆಪಿ ವರಿಷ್ಠ ಕೇಶವ್ ಪ್ರಸಾದ್ ಮೌರ್ಯ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದಲಿತರ ಅಥವಾ ಹಿಂದುಳಿದ ವರ್ಗಗಳ ಪರವಾಗಿಲ್ಲ. ಅವರು ವಿಶ್ವಾಸದ್ರೋಹವನ್ನಷ್ಟೇ ಎಸಗುತ್ತಿದ್ದಾರೆ ಎಂದು ಟೀಕಿಸಿದರು.
17 ಒಬಿಸಿ ಸಮೂಹಗಳಿಗೆ ಸೇರಿದವರಿಗೆ ಹೊಸ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸದಂತೆ ಉತ್ತರಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಮೌರ್ಯ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಎಸ್ಪಿ-ಕಾಂಗ್ರೆಸ್ ಮೈತ್ರಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ ಸಮಾಜವಾದಿ ಪಕ್ಷವು ಮುಳುಗುತ್ತಿರುವ ಹಡಗಾಗಿದೆ ಹಾಗೂ ಕಾಂಗ್ರೆಸ್ ಈಗಾಗಲೇ ಮುಳುಗಿ ಹೋಗಿದೆ. ಬಿಎಸ್ಪಿ ಅದರ ಜೊತೆಗೂಡಿದರೂ ಅದನ್ನು ಪಾರು ಮಾಡಲು ಸಾಧ್ಯವಿಲ್ಲ’’ ಎಂದು ವ್ಯಂಗ್ಯವಾಡಿದರು. ಉತ್ತರಪ್ರದೇಶ ವಿಧಾನಸಭೆಗೆ ಫೆಬ್ರವರಿ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.







