ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡ ಭೇಟಿ

ಮುಲ್ಕಿ, ಜ.24: ಸರಕಾರದ ಹಲವು ಮಿತಿಗಳ ಮಧ್ಯೆಯೂ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ತೆಲಂಗಾಣ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮುಹಮ್ಮದ್ ಅಕ್ಬರ್ ಅಲೀಖಾನ್ ನೇತೃತ್ವದ ನ್ಯಾಕ್ ತಂಡದ ಪ್ರಶಂಸೆ ವ್ಯಕ್ತಪಡಿಸಿದೆ.
ತೃತೀಯ ಆವೃತ್ತಿಯ ಮೌಲ್ಯ ಮಾಪನಕ್ಕಾಗಿ ಜ.23 ಆಗಮಿಸಿದ್ದ ನ್ಯಾಕ್ ತಂಡ ಜ. 24ರ ವರೆಗೆ ಕಾಲೇಜಿನಲ್ಲಿದ್ದು, ವಿವಿಧ ಸ್ತರಗಳಲ್ಲಿ ಪರಿಶೋಧನೆ ನಡೆಸಿತು. ಮಂಗಳವಾರ ಕಾಲೇಜಿನ ಸಂಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ತಂಡದ ಮುಖ್ಯಸ್ಥ ಪ್ರೊ. ಮುಹಮ್ಮದ್ ಅಕ್ಬರ್ ಅಲೀಖಾನ್, ಇಲ್ಲಿನ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ತಂಡ ಒಗ್ಗಟ್ಟಾಗಿ ವಿದ್ಯಾರ್ಥಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ರೂಪಿಸುತ್ತಿದ್ದಾರೆ. 2011ರಲ್ಲಿ ನ್ಯಾಕ್ ತಂಡ ಭೇಟಿ ನೀಡಿದಾಗ ಕಾಲೇಜು ಇದ್ದ ಸ್ಥಿತಿಗಿಂತ ಈ ವರ್ಷ ಚಿತ್ರಣ ಭಿನ್ನವಾಗಿದೆ ಎಂದರು.
ಪಾಠ ಪ್ರವಚನಗಳ ಜೊತೆಗೆ ತಾಂತ್ರಿಕವಾಗಿ ಬದಲಾವಣೆಗಳನ್ನು ತರಲಾಗಿದೆ. ಸ್ಮಾರ್ಟ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾದ ವಿಚಾರಗಳ ಜೊತೆಗೆ ಹುಮ್ಮಸ್ಸನ್ನು ಅಧ್ಯಾಪಕ ವೃಂದ ತುಂಬುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಂಡ ಪರಿಶೋಧನೆ ನಡೆಸಿದ ವರದಿಯ ರಚನಾತ್ಮಕ ಸಲಹೆಗಳನ್ನೊಳಗೊಂಡ ಪ್ರತಿಯನ್ನು ಸಂಸ್ಥೆಯ ಪ್ರಾಂಶುಪಾಲ ಎಂ. ವಿಶ್ವನಾಥ ಭಟ್ ಅವರಿಗೆ ಇದೇ ವೇಳೆ ಹಸ್ತಾಂತರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ನ್ಯಾಕ್ ಸಮಿತಿಯ ಸದಸ್ಯರಾದ ತಮಿಳುನಾಡು ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ ಡಾ. ರಾಜೇಂದ್ರ, ನಾಗಪುರ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ದೇವೇಂದ್ರ ಬೋರ್ಗಟೆ, ಆಂತರಿಕ ಗುಣಮಟ್ಟ ನಿರೀಕ್ಷಣಾ ವಿಭಾಗದ ಸಂಚಾಲಕಿ ರೋಶನಿ ಯಶವಂತ್ ಮೊದಲಾದವರಿದ್ದರು.
ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್,ಶಿಕ್ಷಕ- ಪೋಷಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ. ಎಂ. ವಿಶ್ವನಾಥಭಟ್ ಸ್ವಾಗತಿಸಿದರು. ರೋಶನಿ ಯಶವಂತ್ ವಂದಿಸಿದರು.







