ಮುಲ್ಕಿ ನಗರಸಭೆಯ ಸಾಮಾನ್ಯ ಸಭೆ
ಮುಲ್ಕಿ, ಜ.24: ಕುಡಿಯುವ ನೀರಿನ ಸಮಸ್ಯೆ, ಮುಲ್ಕಿಗೆ ಸುಸಜ್ಜಿತ ಬಸ್ಸು ನಿಲ್ದಾಣ, ಕೆ.ಎಸ್. ರಾವ್ ನಗರದಲ್ಲಿನ ಬಿಜಾಪುರ ಕಾಲನಿಯಲ್ಲಿ ಹರಡುತ್ತಿರುವ ಮಲೇರಿಯಾ ಹಾಗೂ ಮತ್ತಿತರ ವಿಷಯಗಳ ಬಗ್ಗೆ ಮುಲ್ಕಿ ನಗರ ಪಂಚಾಯತ್ ನ ಸಭಾಂಗಣದಲ್ಲಿ ಜರಗಿದ ನಗರ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೋಟೆಕೇರಿಯಲ್ಲಿ ಸುಮಾರು 1 ಎಕ್ರೆ ವಿಸ್ತೀರ್ಣವನ್ನು ಹೊಂದಿರುವ ಕೆರೆಯನ್ನು ದುರಸ್ತಿ ಪಡಿಸಿದಲ್ಲಿ ನೀರಿನ ಸಮಸ್ಯೆ ಬಗೆಹರಿಯಬಹುದೆಂದು ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಸಭೆಯಲ್ಲಿ ಪ್ರಸ್ತಾವಿಸಿದರು. ಕೆರೆಯ ಜಾಗವನ್ನು ನಗರ ಪಂಚಾಯತ್ ಗೆ ಹಸ್ತಾಂತರಿಸಿದಲ್ಲಿ ಪಂಚಾಯತ್ ಮೂಲಕ ದುರಸ್ತಿ ಪಡಿಸಲು ಸಾಧ್ಯವಿದೆ. ಇದಕ್ಕೆ ತಾಂತ್ರಿಕ ತೊಂದರೆಯಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ದುರಸ್ತಿ ಪಡಿಸುವುದಾಗಿ ಶಾಸಕರು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಮುಲ್ಕಿ ಬಸ್ಸು ನಿಲ್ದಾಣದಲ್ಲಿರುವ ಪಾರ್ಕಿಂಗ್‌ನಿಂದಾಗಿ ಬಸ್ಸು ನಿಲ್ದಾಣದಲ್ಲಿರುವ ಅಂಗಡಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಸಭೆಯಲ್ಲಿ ಪ್ರಸ್ತಾವಿಸಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಸಮಸ್ಯೆಯಾಗಿದೆ. ಹೆದ್ದಾರಿಯ ಜಾಗ ವಿಸ್ತರಣೆಯ ಬಳಿಕ ಸೂಕ್ತ ವ್ಯವಸ್ತೆ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಮುಲ್ಕಿಯ ಕೆ.ಎಸ್. ರಾವ್ ನಗರದಲ್ಲಿ ಜನವರಿ ತಿಂಗಳಿನಲ್ಲಿ 12 ಮಲೇರಿಯಾ ಪ್ರಕರಣಗಳು ಕಂಡು ಬಂದಿದೆ ಎಂದು ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಶಕುಂತಳಾ ಸಭೆಗೆ ಮಾಹಿತಿ ನೀಡಿದರು. ಅಲ್ಲದೆ, ಕೆ. ಎಸ್. ರಾವ್ ನಗರದ ಬಿಜಾಪುರ ಕಾಲನಿಯಲ್ಲಿ ರಸ್ತೆಯಲ್ಲಿ ಶೌಚ್ಯದ ನೀರು ನಿಲ್ಲುತ್ತಿದ್ದು ಇದರಿಂದ ಮಲೇರಿಯಾ ಹೆಚ್ಚಾಗಲು ಕಾರಣವಾಗಿದೆ. ಶುಚಿತ್ವದ ಬಗ್ಗೆ ಕಾಳಜಿ ವಹಿಸುವಂತೆ ಅವರು ತಿಳಿಸಿದರು.
ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಪಂಚಾಯತ್ ಆಡಳಿತ ಪಕ್ಷದ ಸದಸ್ಯ ಹರ್ಷರಾಜ್ ಶೆಟ್ಟಿ ಜಿ.ಎಂ. ರನ್ನು ಪ್ರಸ್ತುತ ಸಾಲಿನ ಸ್ತಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
2017ರ ಸಾಲಿನ ಬಜೆಟ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಬಜೆಟ್ ಬಗ್ಗೆ ಪ್ರಸ್ತಾವನೆಯನ್ನು ಮಂಡಿಸಲಾಯಿತು. ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ 2 ಕೋಟಿ ರೂ. ಅನುದಾನದ ಬಗ್ಗೆ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಲಾಯಿತು.







