ಪತ್ನಿಯ ಕೊಲೆ
ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು
ಶಿವಮೊಗ್ಗ, ಜ. 24: ಪತ್ನಿಯ ಕೊಲೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ತಕ್ತಿಯೋರ್ವನಿಗೆ ಜಿಲ್ಲೆಯ ಸಾಗರದ 5ನೆ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಾಗರ ತಾಲೂಕಿನ ಸೂರನಗದ್ದೆಯ ನಿವಾಸಿ, ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನ್ಯಾಯಾಧೀಶೆ ಮಹೇಶ್ವರಿ ಎಸ್. ಹಿರೇಮಠ ಅವರು ಈ ಆದೇಶ ಹೊರಡಿಸಿದ್ದಾರೆ. ಘಟನೆ ಹಿನ್ನೆಲೆ: 2015ರ ಮೇ 3ರಂದು ಪತ್ನಿ ಪ್ರಿಯದರ್ಶಿನಿಯ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪ ಪತಿ ರವಿಯವರ ಮೇಲಿತ್ತು. ಪತ್ನಿ ಸುಂದರವಾಗಿಲ್ಲ. ತೀವ್ರ ಶಂಕೆ ವ್ಯಕ್ತಪಡಿಸುತ್ತಾಳೆ ಎಂದು ಆಕ್ರೋಶಗೊಂಡು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಾದ - ಪ್ರತಿವಾದ ನಡೆದು, ಅಂತಿಮವಾಗಿ ರವಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರಿ ಅಭಿಯೋಜಕರಾಗಿ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.





