ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ
ಕಾಡಾನೆ ಹಾವಳಿ ತಡೆಗೆ ಸರಕಾರಗಳ ದಿವ್ಯ ನಿರ್ಲಕ್ಷ

ಕಾಫಿ ತೋಟಗಳಲ್ಲೇ ಕಾಡಾನೆಗಳ ವಾಸ
ಸಂಕಷ್ಟದಲ್ಲಿ ಕಾರ್ಮಿಕರು, ಬೆಳೆಗಾರರು
ಸಿದ್ದಾಪುರ, ಜ.23: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚೆಗಿನ ದಿನಗಳಲ್ಲಿ ಕಾಡಾನೆಗಳ ಅಟ್ಟಹಾಸ ವಿಪರೀತವಾಗಿದೆ. ಸರಕಾರಗಳು ಶಾಶ್ವತ ಪರಿಹಾರ ರೂಪಿಸಲು ವೈಜ್ಞಾನಿಕ ರೀತಿಯಲ್ಲಿ ಕ್ರಮ ಕೈಗೊಳ್ಳದೆ ಇರುವುದರಿಂದ ರೈತರ ಅಪಾರ ಪ್ರಮಾಣದ ಕೃಷಿ ಫಸಲಿನ ನಾಶದೊಂದಿಗೆ ಕಾರ್ಮಿಕ ಜೀವಗಳು ಬಲಿಯಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ನಡೆದ ಆನೆ ಮತ್ತು ಮಾನವ ಸಂಘರ್ಷದಲ್ಲಿ 57 ಮಾನವ ಜೀವಗಳು ಬಲಿಯಾಗಿದ್ದು, ಇತ್ತೀಚೆಗಷ್ಟೆ 4 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ, 100ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದು, ಹಲವಾರು ಮಂದಿ ಕೈ ಕಾಲು ಮುರಿದು ಕೆಲಸಕ್ಕೂ ತೆರಳಲಾಗದೆ ಅಸಹಾಯಕರಾಗಿ ಹಾಸಿಗೆ ಹಿಡಿದಿದ್ದಾರೆ.
ಕಾಡಾನೆ ಹಾವಳಿ ತಡೆಗೆ ಕಾರ್ಮಿಕರು ಸೇರಿದಂತೆ ಹಲವು ಸಂಘಟನೆಗಳು ನಿರಂತರ ಹೋರಾಟಗಳನ್ನು ನಡೆಸಿವೆೆಯಾದರೂ ಸರಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳದೆ ದಿವ್ಯ ಮೌನಕ್ಕೆ ಶರಣಾಗಿರುವುದರಿಂದ ಆನೆ ಮತ್ತು ಮಾನವ ಸಂಘರ್ಷಗಳು ಹೆಚ್ಚಾಗಲು ಕಾರಣವಾಗಿದೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಾಫಿ ಗಿಡಗಳನ್ನು ಸೊಂಡಿಲಿನಿಂದ ಕಿತ್ತು ಹಣ್ಣುಗಳನ್ನು ಚಪ್ಪರಿಸುವುದರಿಂದ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದ್ದು, ಆನೆಯ ಲದ್ದಿಗಳಲ್ಲಿ ಕಾಫಿ ಬೀಜಗಳು ಕಂಡು ಬರುತ್ತಿದೆ. ಇದೀಗ ಕಾಫಿ ಕೊಯ್ಲು ಸಮಯವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
ಅರಣ್ಯ ಪ್ರದೇಶದ ಸಮೀಪದಲ್ಲಿಯೇ ಕೃಷಿ ಫಸಲಿನೊಂದಿಗೆ ಸಣ್ಣ ಪ್ರಮಾಣದಲ್ಲಿ ತಮ್ಮ ಬದುಕು ಸಾಗಿಸುತ್ತಿರುವ ರೈತರು ಲಕ್ಷಗಟ್ಟಲೆ ಸಾಲ ಮಾಡಿ ಬೆಳೆದ ಬೆಳೆಗಳನ್ನು ಕಾಡಾನೆಗಳು ನಾಶಮಾಡುತ್ತಿವೆ. ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ರೈತರು ಹಲವು ಭಾಗಗಳಲ್ಲಿ ಭತ್ತ ಬೇಸಾಯವನ್ನೆ ಕೈಬಿಟ್ಟಿದ್ದಾರೆ.
ಬೆಳೆ ನಷ್ಟದ ಪರಿಹಾರಕ್ಕಾಗಿ ಬೆಳೆಗಾರರು ವರ್ಷಗಟ್ಟಲೇ ಸರಕಾರಿ ಕಚೇರಿಗಳಲ್ಲಿ ಅಲೆದರೂ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾಥಿಗಳು ಕಾಡಾನೆಗಳಿಗೆ ಹೆದರಿ ಜೀವ ಭಯದೊಂದಿಗೆ ಮನೆಯಿಂದ ತೆರಳುತ್ತಿದ್ದು, ಸಂಜೆ ಮಕ್ಕಳು ತಮ್ಮ ಮನೆ ಸೇರಿದ ನಂತರವಷ್ಟೆ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.
ಮೊದಲು ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಇದೀಗ ಪಟ್ಟಣ ಹಾಗೂ ಮುಖ್ಯ ರಸ್ತೆಗಳಲ್ಲಿಯೂ ತಿರುಗಾಡುತ್ತಿರುವುದರಿಂದ ಗ್ರಾಮಸ್ಥರಲ್ಲೂ ಭಯ ಮೂಡಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಯು ವಿಹಾರಕ್ಕೆ ತೆರಳಿದವರ ಮೇಲೂ ದಾಳಿ ನಡೆದ ಘಟನೆಯ ಬಳಿಕ ಮುಖ್ಯ ರಸ್ತೆಯ ಸಮೀಪದಲ್ಲಿರುವ ಕೆಲವರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.
ಕಾಫಿ ತೋಟಗಳಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಮುಂದಾದರೆ ಆಕ್ರೋಶಗೊಳ್ಳುತ್ತಿರುವ ಆನೆಗಳು ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಕಾಡಾನೆ ತಡೆಗೆಂದು ಕೋಟಿಗಟ್ಟಲೆ ಖರ್ಚು ಮಾಡಿ ಕಂದಕ ನಿರ್ಮಾಣ, ಸ್ಪೈಕ್ ಗೇಟ್ ಹಾಗೂ ಸೋಲಾರ್ ಬೇಲಿ ಅಳವಡಿಕೆ, ಕಾಂಕ್ರೀಟ್ ಪಿಲ್ಲರ್ ನಿರ್ಮಾಣ ಸೇರಿದಂತೆ ಹಲವು ಪ್ರಯತ್ನಗಳನ್ನು ಅರಣ್ಯ ಇಲಾಖೆ ಮಾಡಿದೆಯಾದರೂ ಇವುಗಳನ್ನೆಲ್ಲಾ ವಿಫಲಗೊಳಿಸಿ ಕಾಡಾನೆಗಳು ಅರಣ್ಯದಿಂದ ಕಾಫಿ ತೋಟಗಳ ಮೂಲಕ ಗ್ರಾಮಗಳತ್ತ ಪ್ರವೇಶಿಸುತ್ತಿವೆ. ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು
ಜಿಲ್ಲೆಯ ಸಿದ್ದಾಪುರ, ಪಾಲಿಬೆಟ್ಟ ಮತ್ತು ಅಮ್ಮತ್ತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಅಂದಾಜು 100ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಭಯದ ನೆರಳಿನಲ್ಲಿ ದಿನ ನಿತ್ಯ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 5ಲಕ್ಷ ಪರಿಹಾರ ನೀಡಿ ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆ. ಹೊಟ್ಟೆಪಾಡಿಗಾಗಿ ಕಾಫಿ ತೋಟದ ಕೆಲಸವನ್ನೇ ಅವಲಂಬಿತರಾಗಿರುವ ಬಡಪಾಯಿಗಳಿಗೆ ಆನೆ ಹಾವಳಿಯಿಂದ ಅವರ ಕುಟುಂಬ ಅನಾಥವಾಗುತ್ತಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಇದೀಗ ಕಾಡಾನೆ ಹಾವಳಿಯಿಂದ ಬದುಕುಳಿದರೆ ಸಾಕು ಎಂದು ಕೆಲವು ಕಾರ್ಮಿಕರು ತೋಟಗಳಲ್ಲಿ ಕೆಲಸಕ್ಕೂ ತೆರಳಲಾಗದೆ ಹೊಟ್ಟೆಗೆ ಹಿಟ್ಟಿಲ್ಲದೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಕಳೆದ ಮೂರು ದಶಕದಿಂದಲೂ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಇದ್ದು, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸಿದ ಹಾಗೂ ನಡೆಸುತ್ತಿರುವ ಸರಕಾರಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಕಾಡಾನೆ ಸಮಸ್ಯೆ ಬಗ್ಗೆ ಸರಕಾರಗಳ ಗಮನ ಸೆಳೆಯಲು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಡಾನೆಗಳಿಗೆ ಅರಣ್ಯಗಳಲ್ಲಿ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆ ಇಲ್ಲದೆ ಇರುವು ದರಿಂದ ಕಾಫಿ ತೋಟಗಳಿಗೆ ನುಸುಳಿ ಹಲವಾರು ವರ್ಷಗಳೇ ಕಳೆದಿವೆ. ಕಾಫಿ ತೋಟಗಳಲ್ಲಿಯೇ ಸಂತಾನೋತ್ಪತ್ತಿ ಮಾಡಿ ಅಮಾಯಕ ಜೀವಗಳನ್ನು ಬಲಿ ತೆಗೆದು ಅಪಾರ ಪ್ರಮಾಣದ ಕೃಷಿ ಫಸಲುಗಳನ್ನು ನಾಶಗೊಳಿಸಿ ಮರಿಗಳೊಂದಿಗೆ ರಾಜಾರೋಷವಾಗಿ ತಿರುಗಾಡುತ್ತಿವೆ.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಪೈಕಿ ಸರಕಾರದ ಅನುಮತಿ ಮೇರೆಗೆ ವಿವಿಧ ಭಾಗಗಳ ಕಾಫಿ ತೋಟಗಳಿಂದ ಕಳೆದ ಒಂದು ವರ್ಷದಲ್ಲಿ 7 ಕಾಡಾನೆಗಳನ್ನು ಹಿಡಿದು ಮತ್ತಿಕೋಡು ಮತ್ತು ದುಬಾರೆ ಆನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ. ಇದೀಗ ಮತ್ತೆ ಪುಂಡಾಟಿಕೆ ನಡೆಸುತ್ತಿರುವ 5 ಕಾಡಾನೆಗಳನ್ನು ಪತ್ತೆ ಹಚ್ಚಲಾಗಿದ್ದು, ಅನುಮತಿ ಸಿಕ್ಕಿದ ಬಳಿಕ ಸೆರೆ ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.







