ನನಗೂ ರಾಯಣ್ಣ ಬ್ರಿಗೇಡ್‌ಗೂ ಸಂಬಂಧವಿಲ್ಲ: ಸಂಸದ ಸಿದ್ದೇಶ್ವರ್

ದಾವಣಗೆರೆ, ಜ.24: ನಮಗೂ ರಾಯಣ್ಣ ಬ್ರಿಗೇಡ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ. ಇಲ್ಲಿನ ಹೈಸ್ಕೂಲ್ ಮೈದಾನದ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಿಜೆಪಿಯಲ್ಲಿ ಎರಡು ಗುಂಪುಗಳಾಗಿರುವುದು ಸತ್ಯ. ಇದನ್ನು ನಮ್ಮ ಹೈಕಮಾಂಡ್‌ಗಂಭೀರವಾಗಿ ತೆಗದುಕೊಂಡಿದ್ದು, ಶೀಘ್ರವೇ ಬಗೆಹರಿಸಲಿದೆ ಎಂದರು. ಎಪಿಎಂಸಿ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆ ದಿಕ್ಸೂಚಿಯಲ್ಲ. ಕೆಲ ನಿರ್ದಿಷ್ಟ ಮತದಾರರು ಎಪಿಎಂಸಿ ಚುನಾವಣೆಯಲ್ಲಿ ಮತದಾನ ಮಾಡುತ್ತಾರೆ.
ಆದರೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗುತ್ತದೆ. ಯಾವ ಪಕ್ಷ ಅಧಿಕಾರದಲ್ಲಿರುತ್ತದೋ ಆ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಸಹಜ ಎಂದು ತಿಳಿಸಿದರು. ಎಪಿಎಂಸಿ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಶಕ್ತಿ ಏನೆಂಬುದು ಗೊತ್ತಾಗಿದೆ ಎಂದು ಬಿಜೆಪಿಯ ಕೆಲ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಪಿಎಂಸಿ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ.
ಬಿಜೆಪಿ ಅಭ್ಯರ್ಥಿಗಳ ಪರ ರವೀಂದ್ರನಾಥ್ ಮತಯಾಚನೆ ಮಾಡಿದ್ದರೂ ಏಕೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲ್ಲಿಲ್ಲ. ರವೀಂದ್ರನಾಥ್ ಅವರ ಶಕ್ತಿ ಎಲ್ಲಿ ಹೋಯಿತು ಎಂದು ಮರುಪ್ರಶ್ನೆ ಹಾಕಿದರು. ಮತ್ತೆ ನಾವೆಲ್ಲರೂ ಒಂದಾಗುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ರಾಜಶೇಖರ್, ರಮೇಶ್ ನಾಯ್ಕ, ದಕ್ಷಿಣ ವಿ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಓಂಕಾರಪ್ಪ, ಹೇಮಂತರಾಜ್, ಲಿಂಗರಾಜ್, ಬಸವರಾಜ್, ಪ್ರಭು, ಸದಾನಂದ, ಜಯಮ್ಮಾ, ಸಹನಾ ರವಿ ಸೇರಿದಂತೆ ಇತರರು ಇದ್ದರು.







