ನಾಲ್ಕು ತಿಂಗಳ ಅವಧಿ ಕಠಿಣವಾಗಿತ್ತು: ಸೈನಾ

ಹೊಸದಿಲ್ಲಿ, ಜ.24: ‘‘ಮಂಡಿ ಶಸ್ತ್ರಚಿಕಿತ್ಸೆಯಿಂದ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತ್ತಿ ಗೆಲುವಿನ ನಾಲ್ಕು ತಿಂಗಳ ಅವಧಿ ನನ್ನ ಪಾಲಿಗೆ ಅತ್ಯಂತ ಕಠಿಣ ಕ್ಷಣ ಹಾಗೂ ಭಾವನಾತ್ಮಕ ಪಯಣವಾಗಿತ್ತು’’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
ಸೈನಾ ಇತ್ತೀಚೆಗೆ 18ರ ಹರೆಯದ ಥಾಯ್ಲೆಂಡ್‌ನ ಪಾರ್ನ್‌ಪಾವೀ ಚೋಚುವಾಂಗ್‌ರನ್ನು 22-20, 22-20 ನೇರ ಗೇಮ್‌ಗಳಿಂದ ಮಣಿಸುವುದರೊಂದಿಗೆ ಮಲೇಷ್ಯಾದಲ್ಲಿ ಪ್ರಶಸ್ತಿ ಬರ ನೀಗಿಸಿಕೊಂಡಿದ್ದರು.
ಸೈನಾಗೆ ಕಳೆದ ವರ್ಷವೇ ಗಾಯದ ಸಮಸ್ಯೆ ಕಾಡಲಾರಂಭಿಸಿತ್ತು. ಇದು ಅವರ ಪ್ರದರ್ಶನದ ಮೇಲೆ ಪರಿಣಾಮಬೀರಿತ್ತು. ಆಸ್ಟ್ರೇಲಿಯನ್ ಓಪನ್ ಜಯಿಸುವ ಮೂಲಕ ಅವರು ಚೇತರಿಸಿಕೊಂಡಿದ್ದರು. ಆದರೆ, ಅವರಿಗೆ ಒಲಿಂಪಿಕ್ಸ್ ವೇಳೆ ಮಂಡಿನೋವು ಕಾಣಿಸಿಕೊಂಡಿತ್ತು. ಪ್ರತಿಷ್ಠಿತ ಟೂರ್ನಿಯಲ್ಲಿ ಬೇಗನೆ ಸೋತು ಹೊರ ನಡೆದಿದ್ದರು.
ಒಲಿಂಪಿಕ್ಸ್ ಬಳಿಕ ಶಸ್ತ್ರಚಿಕಿತ್ಸೆಗೆೆ ಒಳಗಾದ ಅವರು ಮೂರು ತಿಂಗಳ ಬಳಿಕ ಚೀನಾ ಓಪನ್‌ನಲ್ಲಿ ಸ್ಪರ್ಧಿಸುವುದರೊಂದಿಗೆ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿದ್ದರು. ಮಕಾವು ಓಪನ್ ಹಾಗೂ ಹಾಂಕಾಂಗ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಅವರು ಮಲೇಷ್ಯಾ ಓಪನ್ ಜಯಿಸಿ ಹೊಸ ವರ್ಷವನ್ನು ಶುಭಾರಂಭ ಮಾಡಿದ್ದರು.





