ಸಹಾ ಸಹಜ ಆಯ್ಕೆ, ಪಾರ್ಥಿವ್ ಕಾಯಬೇಕು: ಗಂಗುಲಿ

ಕೋಲ್ಕತಾ, ಜ.24: ‘‘ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ವಿಷಯಕ್ಕೆ ಸಂಬಂಧಿಸಿ ಬಂಗಾಳದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಸಹಜ ಆಯ್ಕೆಯಾಗಿದ್ದು, ಪಾರ್ಥಿವ್ ಪಟೇಲ್ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ’’ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ ಮಂಗಳವಾರ ನಡೆದ ಇರಾನಿ ಕಪ್ ಪಂದ್ಯದಲ್ಲಿ ಸಹಾ ಬಾರಿಸಿದ ಚೊಚ್ಚಲ ದ್ವಿಶತಕದ ನೆರವಿನಿಂದ ರಣಜಿ ಚಾಂಪಿಯನ್ ಗುಜರಾತ್ ತಂಡವನ್ನು ಮಣಿಸಿದ ಶೇಷ ಭಾರತ ತಂಡ 15ನೆ ಬಾರಿ ಇರಾನಿ ಕಪ್‌ನ್ನು ಜಯಿಸಿತ್ತು. ಗುಜರಾತ್‌ನ ನಾಯಕ ಪಾರ್ಥಿವ್ ಪಟೇಲ್ ದೇಶೀಯ ಕ್ರಿಕೆಟ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಗಾಯಗೊಂಡಿರುವ ಸಹಾರಿಂದ ತೆರವಾಗಿರುವ ಕೀಪರ್ ಸ್ಥಾನವನ್ನು ತುಂಬಲಿದ್ದಾರೆಂದು ವಿಶ್ಲೇಷಿಸಲಾಗಿತ್ತು.
ಪಾರ್ಥಿವ್ ರಣಜಿ ಟ್ರೋಫಿ ಫೈನಲ್‌ನಲ್ಲಿ 196 ಎಸೆತಗಳಲ್ಲಿ 24 ಬೌಂಡರಿಗಳ ಸಹಿತ 143 ರನ್ ಗಳಿಸಿ ಗುಜರಾತ್ ಐತಿಹಾಸಿಕ ಸಾಧನೆ ಮಾಡಲು ನೆರವಾಗಿದ್ದರು.
ಆದರೆ, ಗಂಗುಲಿ ಪ್ರಕಾರ, 31ರ ಹರೆಯದ ಪಾರ್ಥಿವ್ ಇನ್ನಷ್ಟು ದಿನ ಕಾಯಬೇಕು. ದೇಶೀಯ ಮಟ್ಟದಲ್ಲಿ ಅವರು ನಿಧಾನವಾಗಿ ಯಶಸ್ಸು ಸಾಧಿಸಿದ್ದಾರೆ. ಸಹಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.





