ವಾವ್ರಿಂಕ, ಫೆಡರರ್ ಸೆಮಿಫೈನಲ್ ಸೆಣಸಾಟ

ಮೆಲ್ಬೋರ್ನ್, ಜ.24: ಸ್ವಿಸ್ ಆಟಗಾರರಾದ ಸ್ಟಾನಿಸ್ಲಾಸ್ ವಾವ್ರಿಂಕ ಹಾಗೂ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.
ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ.4ನೆ ಆಟಗಾರ ವಾವ್ರಿಂಕ ಅವರು ಎರಡು ಗಂಟೆ, 15 ನಿಮಿಷಗಳ ಹೋರಾಟದಲ್ಲಿ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗರನ್ನು 7-6(7/2), 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಈ ಗೆಲುವಿನೊಂದಿಗೆ 8ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದರು. ಮುಂದಿನ ಸುತ್ತಿನಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್‌ರನ್ನು ಎದುರಿಸಲಿದ್ದಾರೆ.
2014ರಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿರುವ ವಾವ್ರಿಂಕ ನಾಲ್ಕನೆ ಪ್ರಶಸ್ತಿ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ವಾವ್ರಿಂಕ 2015ರಲ್ಲಿ ಫ್ರೆಂಚ್ ಓಪನ್, ಕಳೆದ ವರ್ಷ ಯುಎಸ್ ಓಪನ್ ಜಯಿಸಿದ್ದರು. ಎರಡು ಬಾರಿಯೂ ಸ್ಪೇನ್‌ನ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್‌ರನ್ನು ಮಣಿಸಿದ್ದರು.
ಫೆಡರರ್ ಅಂತಿಮ-4ಕ್ಕೆ: ಇದೇ ವೇಳೆ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್ ಜರ್ಮನಿಯ ಮಿಸ್ಚಾ ಝ್ವೆರೆವಾರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು.
17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕೇವಲ 92 ನಿಮಿಷಗಳ ಆಟದಲ್ಲಿ 6-1, 7-5, 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿರುವ ಫೆಡರರ್ ಮೆಲ್ಬೋರ್ನ್‌ನಲ್ಲಿ 13ನೆ ಬಾರಿ ಸೆಮಿ ಫೈನಲ್‌ಗೆ ತಲುಪಿ ಹೊಸ ದಾಖಲೆ ನಿರ್ಮಿಸಿದರು. ಸ್ವಿಸ್‌ನ ಸ್ಟಾರ್‌ಆಟಗಾರ ಫೆಡರರ್ 41ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
‘‘ಟೂರ್ನಿಯಲ್ಲಿ ತನ್ನ ಪ್ರದರ್ಶನ ತೃಪ್ತಿ ನೀಡಿದೆ. ನಾನು ಈ ಹಂತ ತಲುಪುತ್ತೇನೆಂದು ಯೋಚಿಸಿರಲಿಲ್ಲ. ಸ್ಟಾನ್ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದ್ದೇನೆ’’ ಎಂದು ಫೆಡರರ್ ನುಡಿದರು.
ಫೆಡರರ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆಯಬೇಕಾದರೆ ತಮ್ಮದೇ ದೇಶದ ವಾವ್ರಿಂಕ ಸವಾಲನ್ನು ಗೆಲ್ಲಬೇಕಾಗಿದೆ. ಫೆಡರರ್ ಅವರು ವಾವ್ರಿಂಕ ವಿರುದ್ಧ 18-3 ಮುನ್ನಡೆಯಲ್ಲಿದ್ದಾರೆ.







