ಮೂಡುಬಿದಿರೆ : ಜೆಸಿಐ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ
.jpg)
ಮೂಡುಬಿದಿರೆ , ಜ.24 : ಮಹಿಳಾ ಸಬಲೀಕರಣ, ಯುವಕರಿಗೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜೆಸಿಐ ಮೂಡುಬಿದಿರೆ ತ್ರಿಭುವನ್ ಈ ಬಾರಿಯು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿನೂತನ ಜಾಗೃತಿ ಕಾರ್ಯಕ್ರಮಗಳನ್ನು ಮೂಡುಬಿದಿರೆ ಅರಕ್ಷಕರ ಠಾಣೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಮೂಡುಬಿದಿರೆ ತಹಸೀಲ್ದಾರ್ ಕಚೇರಿ ಬಳಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಸಂಚಾರಿಸುತ್ತಿದ್ದ ದ್ವಿಚಕ್ರವಾಹನವನ್ನು ಮೂಡುಬಿದಿರೆ ಪೊಲೀಸರ ಸಹಾಯದಿಂದ ತಡೆದು ಅವರಿಗೆ ಗುಲಾಬಿ ಹೂವನ್ನು ನೀಡಿ , ನಿಮ್ಮ ಸುರಕ್ಷತೆ ಹೆಲ್ಮೆಟ್ ಧರಿಸಿ ಎಂದು ಜೇಸಿಐ ಸದಸ್ಯರು ನಿವೇದಿಸಿಕೊಂಡರು. ಸಾಮಾನ್ಯ ದಿನಗಳಲ್ಲಿ ಪೊಲೀಸರು ಹೆಲ್ಮೆಟ್ ಧರಿಸದಿದ್ದವರಿಗೆ ದಂಡ ವಿಧಿಸುತ್ತಿದ್ದರೆ , ಹೆಲ್ಮೆಟ್ ಧಾರಣೆ ಜಾಗೃತಿ ಕಾರ್ಯಕ್ರಮದ ದಿನ ಜಾಗೃತಿಯ ನಿವೇದನೆ ಮಾಡಲಾಯಿತು.
ಮೂಡುಬಿದಿರೆ ಆಟೋ ರಿಕ್ಷಾ ಚಾಲಕ ಮಾಲಕ ಸಂಘ ಹಾಗೂ ದ.ಕ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕ ಮಾಲಕ ಸಂಘದ ವತಿಯಿಂದ ರಸ್ತೆ ಸುರಕ್ಷತಾ ಮಾಹಿತಿಯನ್ನು ಹಮ್ಮಿಕೊಳ್ಳಲಾಯಿತು. ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಶಿವಪ್ರಸಾದ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೂಡುಬಿದಿರೆ ಆರಕ್ಷರ ಠಾಣೆಯ ಅಪರಾಧ ಪತ್ತೆ ವಿಭಾಗದ ಎಸ್‌ಐ ಎ.ಕುಶಾಲಪ್ಪ ಗೌಡ, ದ.ಕ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕ ಮಾಲಕ ಸಂಘದ ಅಧ್ಯಕ್ಷ ದಾಮೋದರ ಕೋಟ್ಯಾನ್, ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.
ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಶ್ರೀಧವಲಾ ಕಾಲೇಜಿನ 15 ಎನ್‌ಸಿಸಿ ವಿದ್ಯಾರ್ಥಿಗಳು ಮೂಡುಬಿದಿರೆ ಪೇಟೆಯ ಹಲವೆಡೆ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದರು.
ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್ ಆರ್.ಎಲ್, ಕಾರ್ಯದರ್ಶಿ ಸಂತೋಷ್ ಕುಮಾರ್, ಜೇಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್, ಸಪ್ತಾಹದ ನಿರ್ದೇಶಕರಾದ ಗುರುಪ್ರಸಾದ್, ನವೀನ್, ಸಪ್ತಾಹದ ಪ್ರಾಜೆಕ್ಟ್ ಡೈರೆಕ್ಟರ್ ಸಂಗೀತಾ ಪ್ರಭು, ವಿವಿಧ ಕಾರ್ಯಕ್ರಮಗಳ ಯೋಜನಾ ನಿರ್ದೇಶಕರಾದ ರಾಮ್‌ಪ್ರಸಾದ್, ವರುಣ್, ಸುನೀಲ್, ಸುದೀಪ್ ಬುನ್ನನ್, ಜೇಸಿಐ ಶ್ವೇತಾ ಜೈನ್, ಹಮೀದ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.







