ನಿರ್ದೇಶಿತ ಪಿನಾಕಾ ರಾಕೆಟ್‌ನ ಯಶಸ್ವಿ ಪರೀಕ್ಷಾರ್ಥ ಪ್ರಯೋಗ
ಬಾಲಾಸೋರ್(ಒಡಿಶಾ),ಜ.24: ನಿರ್ದೇಶಿತ ಪಿನಾಕಾ ರಾಕೆಟ್‌ನ ಪರೀಕ್ಷಾರ್ಥ ಪ್ರಯೋಗವನ್ನು ಎರಡನೆಯ ಬಾರಿಗೆ ಮಂಗಳವಾರ ಚಂಡಿಪುರದ ಸಮಗ್ರ ಪರೀಕ್ಷಾ ವಲಯ(ಐಟಿಆರ್)ದಿಂದ ಯಶಸ್ವಿಯಾಗಿ ನಡೆಸಲಾಯಿತು.
ಪಥದರ್ಶಕ ವ್ಯವಸ್ಥೆ ಮತ್ತು ನಿಯಂತ್ರಣ ವ್ಯವಸ್ಥೆಗಳ ಅಳವಡಿಕೆಯೊಂದಿಗೆ ಪಿನಾಕಾ ಮಾರ್ಕ್-ಐಐ ಅನ್ನು ಮಧ್ಯಾಹ್ನ 12:45ಕ್ಕೆ ಯಶಸ್ವಿಯಾಗಿ ಹಾರಿಸಲಾಯಿತು ಮತ್ತು ಈ ಅಭಿಯಾನವು ತನ್ನೆಲ್ಲ ಗುರಿಗಳನ್ನು ಸಾಧಿಸಿದೆ ಎಂದು ಐಟಿಆರ್ ನಿರ್ದೇಶಕ ಬಿ.ಕೆ.ದಾಸ್ ತಿಳಿಸಿದರು.
ಸೇನೆಯ ಉಪ ಮುಖ್ಯಸ್ಥ ಲೆಜಸುಬ್ರತಾ ಸಹಾ, ಫಿರಂಗಿ ದಳದ ಮಹಾ ನಿರ್ದೇಶಕ ಲೆಜ.ಪಿ.ಕೆ.ಶ್ರೀವಾಸ್ತವ ಮತ್ತು ಇತರ ಹಿರಿಯ ಸೇನಾಧಿಕಾರಿಗಳು ಯಶಸ್ವಿ ಪರೀಕ್ಷಾರ್ಥ ಪ್ರಯೋಗಕ್ಕೆ ಸಾಕ್ಷಿಗಳಾಗಿದ್ದರು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಅಲ್ಪಾವಧಿಯಲ್ಲಿ ನಿರ್ದೇಶಿತ ಪಿನಾಕಾ ರಾಕೆಟ್ ಅಭಿವೃದ್ಧಿಗಾಗಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಸೇನೆ ಮತ್ತು ಡಿಆರ್‌ಡಿಒಎಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಿರ್ದೇಶಿತ ಪಿನಾಕಾದ ಯಶಸ್ಸು ಅನಿರ್ದೇಶಿತ ಶಸ್ತ್ರ ವ್ಯವಸ್ಥೆಗಳನ್ನು ನಿಖರವಾದ ಅಸ್ತ್ರಗಳನ್ನಾಗಿ ಪರಿವರ್ತಿಸುವಲ್ಲಿ ದೇಶದ ಸಾಮರ್ಥ್ಯವನ್ನು ಸಾಬೀತುಗೊಳಿಸಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಜಿ.ಸತೀಶ ರೆಡ್ಡಿ ಹೇಳಿದರು.
ಜ.12ರಂದು ಇದೇ ಸ್ಥಳದಿಂದ ಪಿನಾಕಾದ ನಿರ್ದೇಶಿತ ಆವೃತ್ತಿಯ ಮೊದಲ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿತ್ತು.





