ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ
ರಾಷ್ಟ್ರಗೀತೆಗೆ ಅಂಗವಿಕಲರು ಗೌರವ ನೀಡಲು ಆದೇಶ
ಹೊಸದಿಲ್ಲಿ,ಜ.24: ಚಿತ್ರಮಂದಿರಗಳಲ್ಲಿ ಸಿನೆಮಾ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕೆಂದು 2016,ಡಿಸೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಸಾಕಷ್ಟು ಅಸಮಾಧಾನ,ವಿರೋಧ ವ್ಯಕ್ತವಾಗಿದೆ. ಇದೊಂದು ಅನಗತ್ಯ ಕ್ರಮ ಎಂದು ಜನತೆ ಪರಿಗಣಿಸಿದ್ದಾರೆ. ರಾಷ್ಟ್ರಗೀತೆಯನ್ನು ನುಡಿಸುವಾಗ ಅಂಗವಿಕಲ ವ್ಯಕ್ತಿಗಳು ಎದ್ದು ನಿಲ್ಲಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳೂ ತಲೆಯೆತ್ತಿದ್ದವು. ಇದಕ್ಕೆ ಈಗ ಸರಕಾರವು ಉತ್ತರಿಸಿದಂತಿದೆ.
ಈಗ ವೈರಲ್ ಆಗಿರುವ, ದೈನಿಕವೊಂದರಲ್ಲಿ ಪ್ರಕಟಗೊಂಡಿರುವ ವರದಿಯಂತೆ, ರಾಷ್ಟ್ರಗೀತೆಯನ್ನು ನುಡಿಸುವಾಗ ಅಂಗವಿಕಲರು ಅಲುಗಾಡದೆ ಸ್ಥಿರವಾಗಿ ಕುಳಿತಿರಬೇಕು ಮತ್ತು ದೈಹಿಕವಾಗಿ ಸಾಧ್ಯವಿರುವಷ್ಟು ಗರಿಷ್ಠ ಎಚ್ಚರದಲ್ಲಿರಬೇಕು. ಸ್ವಲ್ಪ ಪ್ರಮಾಣದಲ್ಲಿ ಬುದ್ಧಿಮಾಂದ್ಯತೆಯನ್ನು ಹೊಂದಿರುವರಿಗೆ ರಾಷ್ಟ್ರಗೀತೆಯನ್ನು ಗೌರವಿಸುವಂತೆ ತರಬೇತು ನೀಡಬೇಕು ಎಂದು ಗೃಹಸಚಿವಾಲಯವು ತ್ತೀಚೆಗೆ ಹೇಳಿದೆ.
ರಾಷ್ಟ್ರಗೀತೆಯನ್ನು ನುಡಿಸುವಾಗ ಎದ್ದು ನಿಲ್ಲುವುದರಿಂದ ಅಂಗವಿಕಲ ವ್ಯಕ್ತಿಗಳಿಗೆ ಸರ್ವೋಚ್ಚ ನ್ಯಾಯಲಯವು ತ್ತೀಚೆಗೆ ವಿನಾಯಿತಿ ನೀಡಿದ ಬಳಿಕ ಸರಕಾರದ ಈ ಸೂಚನೆ ಹೊರಬಿದ್ದಿದೆ.
ಪತ್ರಿಕೆಯ ಈ ವರದಿ ಟ್ವಿಟರ್‌ಗಳಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಹೇಳಿಕೆಯ ಅಗತ್ಯವೇ ಇರಲಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂಗವಿಕಲರ ಮೇಲೆ ಇಂತಹ ಕಟ್ಟಳೆಯನ್ನು ಹೇರುವ ಮುನ್ನ ಅಂಗವಿಕಲ ಸ್ನೇಹಿಯಾದ ಮೂಲಸೌಕರ್ಯಗಳಾದರೂ ಅವರಿಗೆ ಇವೆಯೇ ಎಂಬ ಮಹತ್ವದ ಪ್ರಶ್ನೆಯನ್ನು ಬಹಳಷ್ಟು ಜನರು ಟ್ವಿಟರ್‌ನಲ್ಲಿ ಎತ್ತಿದ್ದಾರೆ.
ರಾಷ್ಟ್ರಗೀತೆಯನ್ನು ನುಡಿಸುವಾಗ ಆರೆಸ್ಸೆಸ್ ಜನರು ಚಿತ್ರಗಳನ್ನು ಸೆರೆ ಹಿಡಿಯುತ್ತ ಮುಕ್ತವಾಗಿ ಓಡಾಡುತ್ತಿದ್ದರೆ, ಅಲ್ಲಾಡದಂತೆ ಸ್ಥಿರವಾಗಿ ಕುಳಿತುಕೊಳ್ಳುವಂತೆ ಅಂಗವಿಕಲರಿಗೆ ಸರಕಾರವು ಸೂಚಿಸುತ್ತಿದೆ ಎಂದು ಹಲವರು ಕುಟುಕಿದ್ದಾರೆ.





