ಮಾಹಿತಿ ಬಹಿರಂಗಕ್ಕೆ ಐಟಿಗೆ ಚುನಾವಣಾ ಆಯೋಗ ಆದೇಶ
ರಾಜಕೀಯ ಪಕ್ಷಗಳಿಗೆ ದೇಣಿಗೆ
ಹೊಸದಿಲ್ಲಿ, ಜ.24: ಚುನಾವಣಾ ಟ್ರಸ್ಟ್‌ಗಳು ಸ್ವೀಕರಿಸುವ ದೇಣಿಗೆಗಳು ಹಾಗೂ ರಾಜಕೀಯ ಪಕ್ಷಗಳಿಗೆ ಅವುಗಳ ಹಂಚಿಕೆಯು, ಖಾಸಗಿ ಮಾಹಿತಿಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಕೇಂದ್ರೀಯ ಚುನಾವಣಾ ಆಯೋಗ ಮಂಗಳವಾರ ಪ್ರತಿಪಾದಿಸಿದೆ. ಆದಾಯ ತೆರಿಗೆ ಇಲಾಖೆಯು ನಂಬಿಕೆಯ ನೆಲೆಯಲ್ಲಿ ಆ ಮಾಹಿತಿಯನ್ನು ತಡೆಹಿಡಿಯಲು ಸಾಧ್ಯವಿಲ್ಲವೆಂದು ಅದು ಸ್ಪಷ್ಟಪಡಿಸಿದೆ. ರಾಜಕೀಯ ಪಕ್ಷಗಳ ಚುನಾವಣಾ ನಿಧಿ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಆಯೋಗವು ಈ ಸೂಚನೆ ನೀಡಿದೆ.
2003-04ರಿಂದ ಮೊದಲ್ಗೊಂಡು 10 ವರ್ಷಗಳ ಅವಧಿಯಲ್ಲಿ ರಚನೆಯಾದ ಚುನಾವಣಾ ಟ್ರಸ್ಟ್‌ಗಳ ಪಟ್ಟಿಯನ್ನು ಹಾಗೂ ಅವುಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿತ್ತೇ ಎಂಬ ಬಗ್ಗೆ ಬಹಿರಂಗಪಡಿಸುವಂತೆ ಕೇಂದ್ರ ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆಗೆ ನಿರ್ದೇಶಿಸಿದೆ. ಆಯೋಗದ ಈ ಆದೇಶದಿಂದಾಗಿ, ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳು ಪಡೆಯುವ ಎಲ್ಲಾ ದೇಣಿಗೆಯ ವಿವರಗಳನ್ನು ಇನ್ನು ಮಂದೆ ಆದಾಯ ತೆರಿಗೆ ಇಲಾಖೆಯು ಕಡ್ಡಾಯವಾಗಿ ಬಹಿರಂಗಪಡಿಸಬೇಕಾಗುತ್ತದೆ.
ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿರುವ ದೇಣಿಗೆಗಳ ಬಗ್ಗೆ ಎರಡು ವರ್ಷಗಳ ಹಿಂದೆ ಆರ್‌ಟಿಐ ಅರ್ಜಿದಾರನೊಬ್ಬ ಕೇಳಿದ್ದ ಮಾಹಿತಿಗೆ ಉತ್ತರ ನೀಡಲು ಆದಾಯ ತೆರಿಗೆ ಇಲಾಖೆ ನಿರಾಕರಿಸಿತ್ತು. ಟ್ರಸ್ಟ್‌ಗಳ ಕುರಿತ ಮಾಹಿತಿಗಳು ಖಾಸಗಿಯಾಗಿದ್ದು, ಅವುಗಳನ್ನು ನಂಬಿಕೆಯ ನೆಲೆಯಲ್ಲಿ ಬಹಿರಂಗಪಡಿಸಲಾಗಿಲ್ಲ ಹಾಗೂ ಅದನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಚುನಾವಣಾ ಟ್ರಸ್ಟ್‌ಗಳು ಲಾಭರಹಿತ ಕಂಪೆನಿಗಳಾಗಿದ್ದು, ರಾಜಕೀಯ ಪಕ್ಷಗಳಿಗಾಗಿ ವ್ಯಕ್ತಿ ಅಥವಾ ಕಂಪೆನಿಯಿಂದ ದೇಣಿಗೆಯನ್ನು ಸ್ವೀಕರಿಸುವ ಉದ್ದೇಶದಿಂದ ರಚನೆಯಾದುದಾಗಿವೆ. ಈ ಟ್ರಸ್ಟ್‌ಗಳು ಆದಾಯ ತೆರಿಗೆ ವಿನಾಯಿತಿಯನ್ನು ಅವು ಪಡೆಯುತ್ತಿವೆ.
2014-15ರ ವಿತ್ತ ವರ್ಷದಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಏಳು ರಾಜಕೀಯ ಪಕ್ಷಗಳಿಗೆ ಒಟ್ಟು 131.65 ಕೋಟಿ ರೂ. ದೇಣಿಗೆ ಸಂದಾಯವಾಗಿದೆಯೆಂದು ಆರ್‌ಟಿಐ ಅರ್ಜಿದಾರ ನೀತಿ ಬಿಯಾನಿ ಆಯೋಗದ ಗಮನಕ್ಕೆ ತಂದಿದ್ದರು.





