ವಿದ್ಯುತ್ ದರ ಏರಿಕೆಯಲ್ಲಿ ವ್ಯಾಪಾರಿ ಮನೋಭಾವ: ಸತ್ಯನಾರಾಯಣ

ಉಡುಪಿ, ಜ.24: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಚನೆಯಾದ 16ವರ್ಷಗಳಲ್ಲಿ 15 ಬಾರಿ ದರ ಪರಿಷ್ಕರಣೆಯಾಗಿದೆ. ಈ ಬಾರಿ ರಾಜ್ಯದ ಮೆಸ್ಕಾಂ ಸೇರಿದಂತೆ ಐದು ವಿದ್ಯುತ್ ಕಂಪೆನಿಗಳು ಪ್ರತಿ ಯೂನಿಟ್‌ಗೆ 1.48 ರೂ. ಏರಿಕೆ ಮಾಡುವಂತೆ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ವರ್ಷ 1.02 ರೂ. ಪ್ರಸ್ತಾಪವನ್ನು ಪರಿಶೀಲಿಸಿ 48 ಪೈಸೆ ದರ ಏರಿಕೆ ಮಾಡಲಾಗಿದೆ. ಈ ಬಾರಿ ನಾವು ಆಕ್ಷೇಪ ಸಲ್ಲಿಸಿದರೂ ಆಯೋಗ ದರ ಏರಿಕೆ ಮಾಡುತ್ತದೆ. ಇದು ವ್ಯಾಪಾರಿ ಮನೋಭಾವ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಜಪ್ತಿ ಸತ್ಯನಾರಾಯಣ ಉಡುಪ ಟೀಕಿಸಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ವತಿಯಿಂದ ವಿದ್ಯುತ್ ದರ ಏರಿಕೆಯ ಕುರಿತ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮೆಸ್ಕಾಂ ಕಂಪೆನಿ 2013ರಲ್ಲಿ 12.60 ಕೋ.ರೂ. 2014ರಲ್ಲಿ 20 ಲಕ್ಷ ರೂ., 2015ರಲ್ಲಿ 13.92 ಕೋ.ರೂ., 2016ರಲ್ಲಿ 11.12 ಕೋ.ರೂ. ಲಾಭವನ್ನು ಗಳಿಸಿತ್ತು. ವಿದ್ಯುತ್ ಹಂಚಿಕೆ ಮತ್ತು ಸಾಗಾಟದಲ್ಲಿ ಇಡೀ ರಾಜ್ಯದ ಕಂಪೆನಿಗಳು ಶೇ.25ರಷ್ಟು ನಷ್ಟ ಅನುಭವಿಸಿದರೆ, ಮೆಸ್ಕಾಂ ಕೇವಲ ಶೇ.14ಮಾತ್ರ. ಕೇವಲ ಹಂಚಿಕೆಯಲ್ಲಿ ಶೇ.11.25ರಷ್ಟು ನಷ್ಟ ಅನುಭವಿಸುತ್ತಿದೆ. ಇದು ಉಳಿದ ಕಂಪೆನಿಗಳಿಗಿಂತ ಅತಿ ಕಡಿಮೆ. ಉಳಿದ ಕಂಪೆನಿಗಳು ಶೇ.80ರಷ್ಟು ವಿದ್ಯುತ್ ಬಿಲ್ ಸಂಗ್ರಹಿಸಿದರೆ, ಮೆಸ್ಕಾಂ ಶೇ.103ರಷ್ಟು ವಿದ್ಯುತ್ ಬಿಲ್ ಸಂಗ್ರಹಿಸುತ್ತಿದೆ. ಮೆಸ್ಕಾಂಗೆ ಉಳಿದ ನಾಲ್ಕು ಕಂಪೆನಿಗಳಿಂದ ಒಟ್ಟಾರೆ 900 ಕೋ.ರೂ. ಹಣ ಬರಲು ಬಾಕಿಯಿದೆ ಎಂದರು.
ರಾಜ್ಯ ವಿದ್ಯುತ್ ಕಂಪೆನಿಗಳು 2016ರ ಆರ್ಥಿಕ ವರ್ಷದವರೆಗೆ 453 ಕೋ.ರೂ., 2017ರ ಮಾರ್ಚ್‌ವರೆಗೆ 148.26ಕೋ.ರೂ. ಕೊರತೆಯನ್ನು ತೋರಿಸುತ್ತಿದ್ದು, 2018ಕ್ಕೆ ಇದರ ಪ್ರಮಾಣ 700ಕೋ.ರೂ. ಆಗುವುದರಿಂದ ಅದನ್ನು ತುಂಬಿಸಲು ಪ್ರತಿ ಯೂನಿಟ್‌ಗೆ ಸರಾಸರಿ 1.48 ರೂ. ಏರಿಕೆ ಮಾಡಿದರೆ 700ಕೋ.ರೂ. ಕೊರತೆಯನ್ನು ತುಂಬಿಸಬಹುದು ಎಂದು ಹೇಳಿಕೊಂಡಿದೆ. ಆದರೆ ಆಯೋಗ ಇದನ್ನು ಪರಿಶೀಲಿಸಿ ದರ ಏರಿಕೆ ನಿರ್ಧರಿಸಲಿದೆ ಎಂದವರು ನುಡಿದರು.
ಮೆಸ್ಕಾಂ ಒಟ್ಟು ನಷ್ಟದಲ್ಲಿ 239ಕೋ.ರೂ. ಪೆನ್‌ಶನ್ ಆ್ಯಂಡ್ ಗ್ರಾಚ್ಯುಟಿ ಟ್ರಸ್ಟ್ ಎಂಬುದಾಗಿ ತೋರಿಸಿದೆ. ಈವರೆಗೆ ಬೆಳಕಿಗೆ ಬಾರದ ಇಷ್ಟು ಮೊತ್ತ ಈ ಬಾರಿ ಬಹಿರಂಗ ಪಡಿಸಲಾಗಿದೆ. ಇದರಲ್ಲಿ ಗೋಲ್‌ಮಾಲ್ ನಡೆದಿದ್ದು, ಈ ಕುರಿತು ತನಿಖೆಯಾಗಬೇಕಿದೆ. ಈ ನಷ್ಟವನ್ನು ಗ್ರಾಹಕರ ತಲೆ ಮೇಲೆ ಹಾಕುವ ಕೆಲಸ ಮಾಡುತ್ತಿದೆ. ಆದರೆ ಸರಕಾರ ಇದನ್ನು ಭರಿಸಲು ನಿರಾಕರಿಸಿದೆ ಎಂದವರು ಹೇಳಿದರು.
ಚೇಂಬರ್ ಆ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಟ್ರಸ್ಟಿ ಎ.ಪಿ.ಕೊಡಂಚ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಸಂಚಾಲಕ ಕೆ.ದಾಮೋದರ್ ಐತಾಳ್ ಸ್ವಾಗತಿಸಿದರು. ಪ್ರೊ.ಕೆ.ನಾರಾಯಣ್ ಠರಾವು ಮಂಡಿಸಿದರು. ವಾದಿರಾಜಾಚಾರ್ಯ ವಂದಿಸಿದರು. ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.
ಸದ್ಯಕ್ಕೆ ವಿದ್ಯುತ್ ದರ ಪರಿಷ್ಕರಣೆ ಮಾಡಬಾರದು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೀಡಿರುವ ನಿರ್ದೇಶನವನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು. ಎಲ್ಲ ಸ್ಥಾವರಗಳಿಗೆ ಮೀಟರ್ ಅಳವಡಿಕೆ ಮಾಡಬೇಕು. ಉಚಿತ ವಿದ್ಯುತ್‌ಗೆ ಮಿತಿ ಮಾಡಬೇಕು. ವಿದ್ಯುತ್ ಸೋರಿಕೆ ತಡೆಗಟ್ಟಬೇಕು. ಅಕ್ರಮ ಸಕ್ರಮ ನಿಯಮವನ್ನು ಕೈಬಿಡಬೇಕು. ಸರಿಯಾಗಿ ವಿದ್ಯುತ್ ಬಿಲ್ ಪಾವತಿಸುವವರಿಗೆ ರಿಯಾಯಿತಿ ನೀಡಬೇಕು. ವಿದ್ಯುತ್ ಏರಿಳಿತದಿಂದ ಆಗುವ ನಷ್ಟವನ್ನು ತುಂಬಿಸಬೇಕೆಂಬ ಬೇಡಿಕೆಯನ್ನು ಸಭೆಯಲ್ಲಿ ಮಂಡಿಸಿದ ಎ.ಪಿ.ಕೊಡಂಚ, ಇದನ್ನು ಮೆಸ್ಕಾಂಗೆ ಕಳುಹಿಸಿಕೊಡಲಾಗುವುದು ಎಂದರು.







