ಕಂಬಳ ಉಳಿವಿಗೆ ಪಕ್ಷಾತೀತ ಹೋರಾಟ: ರಂಜನ್ ಗೌಡ
ಬೆಳ್ತಂಗಡಿ, ಜ.24: ರೈತ ಪ್ರೀತಿಯಿಂದ ಕೃಷಿಗಾಗಿ ಸಾಕುತ್ತಿರುವ ಕೋಣಗಳನ್ನು ಉತ್ತಮವಾಗಿ ಪಳಗಿಸಿ ಕಂಬಳಕ್ಕೆ ಬಳಸಲಾಗುತ್ತಿದ್ದು, ಇದನ್ನು ನಿಲ್ಲಿಸಲು ಕೃಷಿ ಪರಂಪರೆ ತಿಳಿಯದ ಎನ್‌ಜಿಒಗಳು ಕಾನೂನಿನ ಮೊರೆ ಹೋಗಿವೆ ಇದರಿಂದ ಕಂಬಳಕ್ಕೆ ಅಡೆತಡೆ ಉಂಟಾಗಿದೆ. ಯಾವುದೇ ಕಾರಣಕ್ಕೂ ಕಂಬಳ ನಿಲ್ಲಬಾರದು ಇದಕ್ಕಾಗಿ ಪಕ್ಷಭೇದ ಮರೆತು ಹೋರಾಟ ನಡೆಸಲಾಗುವುದು ಎಂದು ಬಂಗಾಡಿ-ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದ್ದಾರೆ
ಪತ್ರಿಕಾಗೊಷ್ಠಿಯಲ್ಲಿಂದು ಮಾತನಾಡಿದ ಅವರು, ಅನಾದಿಕಾಲದಿಂದ ನಡೆದು ಬಂದ ಗ್ರಾಮೀಣ ಕ್ರೀಡೆ ಇದಾಗಿದ್ದು, ಕಂಬಳಕ್ಕೆ ಡಾ.ಹೆಗ್ಗಡೆ, ಅಳದಂಗಡಿ ಅರಸರು ಸೇರಿದಂತೆ ಅನೇಕ ಮಹಾನೀಯರು ಬೆಂಬಲ ಸೂಚಿಸಿದ್ದು, ಅವರ ಮಾರ್ಗದರ್ಶನ ಪಡೆದು ಕಂಬಳ ಉಳಿಸಲು ಹೋರಾಟ ನಡೆಸಲಾಗುವುದು.
ಜ.27ರಂದು ಮಂಗಳೂರಿನಲ್ಲಿ ಮಾನವ ಸರಪಳಿ ಮಾಡುವ ಮೂಲಕ ಮತ್ತು 28ರಂದು ಮೂಡುಬಿದಿರೆಯಲ್ಲಿ ಕೋಣಗಳೊಂದಿಗೆ ಮತ್ತು ಓಡಿಸುವವರೊಂದಿಗೆ ಕಂಬಳ ಪ್ರೇಮಿಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದು. ಜ.30ರ ಕೋರ್ಟ್ ಆದೇಶದ ಬಳಿಕ ಪ್ರತಿಭಟನೆಯ ರೂಪುರೇಷೆ ಮಾಡಲಾಗುವುದು ಎಂದರು. ಕೊಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಎಂ.ದಯಾಕರ್, ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿದರು. ಬಳ್ಳಮಂಜ ಕಂಬಳ ಸಮಿತಿಯ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ, ವೇಣೂರು ಕಂಬಳ ಸಮಿತಿಯ ವಲೇರಿಯನ್ ಲೋಬೊ, ಬಂಗಾಡಿ ಕೊಲ್ಲಿ ಸಮಿತಿಯ ಖಾಸಿಂ ಬಂಗಾಡಿ, ಭರತ್ ಕುಮಾರ್, ತುಂಗಪ್ಪಪೂಜಾರಿ, ತುಳುನಾಡು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್ ಜೆ ಉಪಸ್ಥಿತರಿದ್ದರು.







