ನಮ್ಮ ರಾಜಕೀಯ ಪಕ್ಷಗಳು ಎಷ್ಟು ಪಾರದರ್ಶಕ?

ಹೊಸದಿಲ್ಲಿ, ಜ.25: ಸ್ವಚ್ಛ, ಪಾರದರ್ಶಕ ಆಡಳಿತದ ಭರವಸೆ ನೀಡುವ ರಾಜಕೀಯ ಪಕ್ಷಗಳು ಎಷ್ಟು ಪಾರದರ್ಶಕ ಗೊತ್ತೇ? ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಡೆಸಿದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದಲ್ಲಿ ಶೇ.69ರಷ್ಟು ಪಾಲು ಅಜ್ಞಾತ ಮೂಲಗಳಿಂದ ಬಂದಿದೆ. ರಾಜಕೀಯ ಪಕ್ಷಗಳು 20 ಸಾವಿರಕ್ಕಿಂತ ಅಧಿಕ ಮೊತ್ತದ ದೇಣಿಗೆಯ ಮೂಲ ವಿವರಗಳನ್ನು ನೀಡಬೇಕಿಲ್ಲ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳ ಬಹುತೇಕ ಆದಾಯ ಹೀಗೆ ಅಘೋಷಿತ ಮೂಲಗಳಿಂದಲೇ ಬರುತ್ತಿದೆ ಎಂಬ ಅಂಶ ಬಯಲಾಗಿದೆ.
2004- 2005ರಿಂದ 2014-15ರ ವರೆಗೆ ಅಂದರೆ ಕಳೆದ ಹತ್ತು ವರ್ಷದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ವಿವರಗಳ ಪ್ರಕಾರ, ಎಲ್ಲ ಪ್ರಮುಖ ಪಕ್ಷಗಳ ಒಟ್ಟು ಸಂಗ್ರಹ 11,367 ಕೋಟಿ ರೂಪಾಯಿ. ಈ ಪೈಕಿ 7832 ಕೋಟಿ ರೂಪಾಯಿ ಗುಪ್ತ ಮೂಲಗಳಿಂದ ಬಂದಿದೆ.
ಸರಕಾರದ ನೋಟು ರದ್ದತಿಯಂಥ ಕ್ರಮಗಳು ಪರಿಣಾಮಕಾರಿಯಾಗಬೇಕಾದರೆ ರಾಜಕೀಯ ದೇಣಿಗೆಯನ್ನು ಪಾರದರ್ಶಕವಾಗಿಸಬೇಕು ಎನ್ನುವುದು ಎಡಿಆರ್ ಸಂಸ್ಥಾಪಕ ಪ್ರೊಫೆಸರ್ ಜಗದೀಪ್ ಚೋಕರ್ ಅವರ ಅಭಿಪ್ರಾಯ. ಬಹುತೇಕ ರಾಜಕೀಯ ದೇಣಿಗೆಗಳು ಕಾಳಧನ ಎಂದು ನಂಬಲಾಗಿದೆ ಎನ್ನುವುದು ಅವರ ವಿವರಣೆ.
ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಎಂದರೆ 3982 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಈ ಪೈಕಿ ಶೇಕಡ 85ರಷ್ಟು ಅಘೋಷಿತ ಮೂಲಗಳಿಂದ ಬಂದದ್ದು. ಬಿಜೆಪಿಯ ಆದಾಯ 3272 ಕೋಟಿ ಆಗಿದ್ದು, ಇದರಲ್ಲಿ ಅಘೋಷಿತ ಮೂಲಗಳಿಂದ ಬಂದ ಆದಾಯ ಶೇಕಡ 65ರಷ್ಟು. 893 ಕೋಟಿ ರೂಪಾಯಿ ದೇಣಿಗೆ ಪಡೆದಿರುವ ಸಿಪಿಎಂನ ಶೇಕಡ 53ರಷ್ಟು ದೇಣಿಗೆ ಅಜ್ಞಾತ ಮೂಲದಿಂದ ಬಂದದ್ದು.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ ಗರಿಷ್ಠ ದೇಣಿಗೆ ಪಡೆದಿದ್ದು, 766 ಕೋಟಿ ರೂಪಾಯಿಯ ಪೈಕಿ ಶೇಕಡ 94ರಷ್ಟು ಅಜ್ಞಾತ ಮೂಲದಿಂದ ಬಂದಿದೆ.







