ಮೋದಿಗೆ ದೊಡ್ಡಣ್ಣನ ಆಹ್ವಾನ!
ಟ್ರಂಪ್ ಸ್ಪೀಕಿಂಗ್..ಇಂಡಿಯಾ ಈಸ್ ಟ್ರೂ ಫ್ರೆಂಡ್

ವಾಷಿಂಗ್ಟನ್, ಜ.25: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಜತೆಗೆ ಭಾರತ ನೈಜ ಮಿತ್ರರಾಷ್ಟ್ರ ಎಂದು ಬಣ್ಣಿಸಿದ್ದಾರೆ.
ಉಭಯ ಮುಖಂಡರು ಮಂಗಳವಾರ ರಾತ್ರಿ ಕೆಲ ನಿಮಿಷಗಳ ಕಾಲ ದೂರವಾಣಿ ಮಾತುಕತೆ ನಡೆಸಿದರು. ಅಧಿಕಾರ ಸ್ವೀಕರಿಸಿ ನಾಲ್ಕೇ ದಿನದಲ್ಲಿ ಭಾರತದ ಪ್ರಧಾನಿ ಜತೆ ಮಾತನಾಡಿ, ವ್ಯಾಪಾರ, ರಕ್ಷಣೆ, ಭಯೋತ್ಪಾದನೆಯಂಥ ವಿಷಯಗಳ ಬಗ್ಗೆ ಚರ್ಚಿಸಿದರು.
"ಅಮೆರಿಕ ಭಾರತವನ್ನು ನಿಜವಾದ ಮಿತ್ರರಾಷ್ಟ್ರ ಹಾಗೂ ವಿಶ್ವದ ಸವಾಲುಗಳನ್ನು ಎದುರಿಸಲು ಸೂಕ್ತ ಪಾಲುದಾರ ಎಂದು ಪರಿಗಣಿಸುತ್ತದೆ" ಎಂದು ಶ್ವೇತಭವನ ಕರೆ ವಿವರಗಳನ್ನು ಬಿಡುಗಡೆ ಮಾಡಿ ಬಣ್ಣಿಸಿದೆ. ವರ್ಷದ ಉತ್ತರಾರ್ಧದಲ್ಲಿ ಮೋದಿ ಶ್ವೇತಭವನ ಭೇಟಿಯನ್ನೂ ಅಧ್ಯಕ್ಷರು ಎದುರು ನೋಡುತ್ತಿದ್ದಾರೆ ಎಂದು ವಿವರಿಸಿದೆ.
ಉಭಯ ದೇಶಗಳ ಸಂಬಂಧ ವೃದ್ಧಿ, ರಕ್ಷಣೆ ಮತ್ತು ಆರ್ಥಿಕತೆ ವಿಚಾರದಲ್ಲಿ ಸಹಕಾರ, ದಕ್ಷಿಣ ಹಾಗೂ ಕೇಂದ್ರ ಏಷ್ಯಾದಲ್ಲಿ ಶಾಂತಿಸ್ಥಾಪನೆ ವಿಚಾರಗಳು ಚರ್ಚೆಗೆ ಬಂದವು. ಜಾಗತಿಕಮಟ್ಟದಲ್ಲಿ ಭಯೋತ್ಫಾದನೆ ನಿಗ್ರಹಕ್ಕೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.





