ಬಿ.ಎಸ್.ವೈ ಬ್ರಿಗೇಡನ್ನು ಏಕೆ ವಿರೋಧಿಸುತ್ತಿದ್ದಾರೆ?: ಈಶ್ವರಪ್ಪ ಪ್ರಶ್ನೆ

ಬಾಗಲಕೋಟೆ, ಜ.25: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ಹಿಂದುಳಿದವರು ದಲಿತರು ಜಾಗೃತಿಯಾಗುತ್ತಿದ್ದು, ಇದರಿಂದ ಕಾ೦ಗ್ರೆಸ್ ನವರಿಗೆ ಮತ್ತು ಬಿಎಸ್ ವೈಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಯಡಿಯೂರಪ್ಪ ಬ್ರಿಗೇಡನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಅವರು ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಗೇಡ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಿಚಾರಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗಮನಕ್ಕೆ ತಂದಿದ್ದೇನೆ. 28 ಜನರು ಮಾತ್ರ ತಮ್ಮ ವಿರುದ್ಧ ಸಹಿಸಂಗ್ರಹ ಮಾಡಿದ್ದು, ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಇಂತಹ ವ್ಯವಸ್ಥೆಯಲ್ಲಿಯೇ ಇಲ್ಲ. ಸಹಿ ಸಂಗ್ರಹಕ್ಕೆ ಬೆಲೆಯಿಲ್ಲ ಎಂದು ಪಕ್ಷದ ರಾಜ್ಯದ ಪ್ರಭಾರಿ ಮುರಳೀಧರರಾವ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಬಿಎಸ್ ವೈ ಅಧ್ಯಕ್ಷರಾದ ಮೇಲೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಕೋರ್ ಕಮೀಟಿಯಲ್ಲಿ ಚರ್ಚಿಸದೆ ಪಕ್ಷದಲ್ಲಿ ದುಡಿದವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಅಲ್ಲದೆ ಕೆಜೆಪಿ ಮೂಲದವರಿಗೆ ಮಾತ್ರ ಜವಾಬ್ದಾರಿ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಯಾವುದೇ ಕಾರಣಕ್ಕೂ ಬ್ರಿಗೇಡ್ ಸಮಾವೇಶ ನಿಲ್ಲಿಸೋದಿಲ್ಲ. ಜನವರಿ 26ರಂದು ನಡೆಯುವ ರಾಯಣ್ಣ ಬಲಿದಾನ ಸಮಾವೇಶಕ್ಕೆ ಯಾರನ್ನು ಆಹ್ವಾನಿಸಿಲ್ಲ. ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದರು.







