ಲಗಾಮು ಕಳೆದುಕೊಂಡ ಶರದ್ ಯಾದವ್ ನಾಲಗೆ ಹೇಳಿದ್ದೇನು?
ಮಗಳ ಮರ್ಯಾದೆ ಹೋದರೆ...

ಪಾಟ್ನಾ, ಜ.25: ನಗರದಲ್ಲಿ ಜನವರಿ 24ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಜೆಡಿ(ಯು) ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಅವರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.ಮತವನ್ನು ಮಗಳ ಮಾನಕ್ಕಿಂತಲೂ ಮಿಗಿಲು ಎಂದು ಅವರು ಹೇಳಿದ್ದಾರೆ.'' ಈ ಬ್ಯಾಲಟ್ ಪೇಪರ್ ಇದೆಯಲ್ಲ, ಇದರ ಬಗ್ಗೆ ಜನರಿಗೆ ಬಹಳಷ್ಟು ತಿಳುವಳಿಕೆ ನೀಡುವ ಅಗತ್ಯವಿದೆ. ಮತ ಚಲಾಯಿಸುವ ಗೌರವ ನಿಮ್ಮ ಪುತ್ರಿಯ ಮಾನಕ್ಕಿಂತಲೂ ದೊಡ್ಡದು.'' ಎಂದಿದ್ದಾರೆ ಯಾದವ್. ಅಷ್ಟಕ್ಕೇ ನಿಲ್ಲಿಸದೆ''ಪುತ್ರಿಯ ಮಾನ ಕಳೆದು ಹೋದರೆ ಆಕೆಯ ಗ್ರಾಮದ ಮರ್ಯಾದೆ ಕೂಡ ಹೋಗುತ್ತದೆ, ಆದರೆ ಮತವೊಂದು ಮಾರಾಟವಾದರೆ ದೇಶದ ಮಾನವೇ ಹೋಗುತ್ತದೆ. ನಮ್ಮ ಎಲ್ಲಾ ಕನಸುಗಳು ಭಗ್ನವಾಗುತ್ತವೆ,'' ಎಂದು ಅವರು ಹೇಳಿದ್ದರು.
ಅವರ ಈ ಭಾಷಣದ ವರದಿಯೊಂದಿಗೆ ವೀಡಿಯೊವನ್ನು ನ್ಯೂಸ್ ಏಜೆನ್ಸಿ ಎಎನ್‌ಐ ಪ್ರಕಟಿಸಿತ್ತು. ಜೆಡಿ(ಯು) ಮಾಜಿ ಅಧ್ಯಕ್ಷರೂ, ರಾಜ್ಯಸಭಾ ಸಂಸದರೂ ಆಗಿರುವ ಶರದ್ ಯಾದವ್ ಅವರಿಂದ ಬಂದ ಇಂತಹ ಮಾತು ಹಲವರಿಗೆ ಆಶ್ಚರ್ಯ ತಂದಿದೆ. ಕಳೆದ ವರ್ಷ ಅಧಿಕಾರಕ್ಕೆ ಬಂದ ಬಿಹಾರದ ಮಹಾ ಮೈತ್ರಿ ಕೂಟದಲ್ಲಿ ಇವರ ಪಕ್ಷ ಕೂಡ ಭಾಗಿಯಾಗಿದೆ.
ಶರದ್ ಯಾದವ್ ಅವರು ಈ ಹಿಂದೆ ಕೂಡ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದರು. ಮಾರ್ಚ್ 2015ರಲ್ಲಿ ರಾಜ್ಯಸಭೆಯಲ್ಲಿ ವಿಮಾ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅವರು ದಕ್ಷಿಣದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಭಾರೀ ಆಕ್ರೋಶವೆದುರಿಸಿದ್ದರು. ''ದಕ್ಷಿಣದ ಮಹಿಳೆಯರು ನೋಡುವುದಕ್ಕೆ ಎಷ್ಟು ಸುಂದರವಾಗಿದ್ದಾರೆಯೋ ಅವರ ದೇಹವೂ ಅಷ್ಟೇ ಸುಂದರವಾಗಿದೆ. ಅವರಿಗೆ ನೃತ್ಯವೂ ಬರುತ್ತದೆ,'' ಎಂದು ಅವರು ಹೇಳಿದ್ದರು.







