ಅರ್ನಬ್ ' ರಿಪಬ್ಲಿಕ್ ' ವಿರುದ್ಧ ಸ್ವಾಮಿಯ ಸರ್ಜಿಕಲ್ ದಾಳಿ !
ಮಾಡಿದ್ದೇನು ?

ಹೊಸದಿಲ್ಲಿ, ಜ.25: ಪತ್ರಕರ್ತ ಹಾಗೂ ಟೈಮ್ಸ್ ನೌ ಚಾನಲ್ ನ ಮಾಜಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯ ಪ್ರಸ್ತಾವಿತ ಹೊಸ ನ್ಯೂಸ್ ಚಾನೆಲ್ ಗೆ‘ರಿಪಬ್ಲಿಕ್’ ಎಂಬ ಹೆಸರಿಟ್ಟಿರುವುದನ್ನು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
‘‘ಕೆಲವು ಹೆಸರುಗಳು ಹಾಗೂ ಲಾಂಛನಗಳನ್ನು ಉಪಯೋಗಿಸುವುದನ್ನು ಹೆಸರುಗಳು ಹಾಗೂ ಲಾಂಛನಗಳ ದುರುಪಯೋಗ ತಡೆ ಕಾಯ್ದೆ 1950 ಅನ್ವಯ ವಾಣಿಜ್ಯಕ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜನವರಿ 13ರಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಸ್ವಾಮಿ ನೆನಪಿಸಿದ್ದಾರೆ.
ಹೀಗಿರುವಾಗ ನ್ಯೂಸ್ ಚಾನಲ್ ಒಂದಕ್ಕೆ ರಿಪಬ್ಲಿಕ್ ಎಂಬ ಹೆಸರಿನಡಿ ಅನುಮತಿ ನೀಡುವುದು ಕಾನೂನಿಗೆ ವಿರುದ್ಧವಾಗುವುದಲ್ಲದೆ ಲಾಂಛನಗಳು ಹಾಗೂ ಹೆಸರುಗಳ ದುರುಪಯೋಗ ತಡೆ ಕಾಯ್ದೆ ಉಲ್ಲಂಘನೆಯೂ ಆಗುವುದು,’’ ಎಂದು ಸ್ವಾಮಿ ಹೇಳಿದ್ದಾರೆ.
ಟೈಮ್ಸ್ ನೌ ಮುಖ್ಯ ಸಂಪಾದಕ ಹುದ್ದೆಯಿಂದ ನವೆಂಬರ್ 1ರಂದು ರಾಜೀನಾಮೆ ನೀಡಿದ ಬಳಿಕ ಕಳೆದ ಡಿಸೆಂಬರ್ ತಿಂಗಳಲ್ಲಿ ಅವರು ತಾವು ಹೊಸ ಚಾನಲ್ ಒಂದನ್ನು ಆರಂಭಿಸುವುದಾಗಿ ಘೋಷಿಸಿದ್ದರು.
ಮುಂಬರುವ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಮುನ್ನ ಅರ್ನಬ್ ಹೊಸ ಚಾನಲ್ ಕಾರ್ಯಾರಂಭಿಸುವುದಾಗಿ ಹೇಳಲಾಗಿದ್ದು ಈಗಾಗಲೇ ರಿಪಬ್ಲಿಕ್ ಹೆಸರಿನಲ್ಲಿ ಫೇಸ್ ಬುಕ್ ಹಾಗೂಟ್ವಿಟ್ಟರ್ ಖಾತೆಗಳನ್ನು ಹೊಂದಿದ್ದು ಸುಮಾರು 1 ಲಕ್ಷ ಫಾಲೋವರ್ಸ್ ಇದ್ದಾರೆ.
ಎಆರ್‌ಜಿ ಔಟ್ಲಿಯರ್ ಮೀಡಿಯಾ ಪ್ರೈ. ಲಿ. ಎಂಬ ಕಂಪೆನಿಯ ಭಾಗವಾಗಿ ರಿಪಬ್ಲಿಕ್ ಇರುವುದಲ್ಲದೆ ಈ ಕಂಪೆನಿಯ ಆಡಳಿತ ನಿರ್ದೇಶಕರನ್ನಾಗಿ ಅರ್ನಬ್ ಅವರನ್ನುನವೆಂಬರ್ 19ರಂದು ನೇಮಿಸಲಾಗಿತ್ತು. ಕೇರಳ ಎನ್ಡಿಎ ಉಪಾಧ್ಯಕ್ಷರಾಗಿರುವ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಅವರು ಈ ಸಂಸ್ಥೆಯಲ್ಲಿ ಅತಿ ದೊಡ್ಡ ಹೂಡಿಕೆದಾರರಾಗಿದ್ದು ಅವರು ಅದರ ನಿರ್ದೇಶಕರೂ ಆಗಿದ್ದಾರೆ.







