ಕಂಬಳ ನಿಷೇಧವಾದರೆ ರಾಜ್ಯ ಸರಕಾರದಿಂದ ಸುಗ್ರೀವಾಜ್ಞೆಯ ಆಶ್ವಾಸನೆ : ಎಡ್ತೂರು ರಾಜೀವ ಶೆಟ್ಟಿ

ಬಂಟ್ವಾಳ, ಜ.25: ಕಂಬಳ ಉಳಿಸುವ ನಿಟ್ಟಿನಲ್ಲಿ ಜನವರಿ 28ರಂದು ಮೂಡಬಿದ್ರೆಯಲ್ಲಿ ನಡೆಯುವ ಪಕ್ಷಾತೀತ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಬಂಟ್ವಾಳ ತಾಲೂಕಿನ ಕಂಬಳ ಕೋಣಗಳ ಮಾಲಕರು, ಕಂಬಳ ಪೋಷಕರು, ತೀರ್ಪುಗಾರರು ಹಾಗೂ ಕಂಬಳಾಭಿಮಾನಿಗಳು ಘೋಷಿಸಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಬಳದ ಪ್ರಧಾನ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ ಹಾಗೂ ಕಂಬಳ ಜಿಲ್ಲಾ ಸಮಿತಿಯ ಮುಖಂಡ, ಕಂಬಳದ ಉಳಿವಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಸೀತಾರಾಮ ಶೆಟ್ಟಿ ಬಂಟ್ವಾಳ ಮಾತನಾಡಿ, ಪ್ರಾಣಿ ಹಿಂಸೆಯ ನೆಪದಲ್ಲಿ ಪೇಟಾ ಸಂಸ್ಥೆ ಸುಳ್ಳು ಆರೋಪಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ದಿಕ್ಕು ತಪ್ಪಿಸುತ್ತಿದೆ. ಕಂಬಳ ನಿಷೇಧದ ಹಿಂದೆ ಷಡ್ಯಂತರ ಅಡಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪೇಟಾ ಸಂಸ್ಥೆ ಆರೋಪಿಸಿರುವುದಂತೆ ಕಂಬಳದಲ್ಲಿ ಕೋಣಗಳು ಹೆದರುವ, ಭೀತಿಯ ಮತ್ತು ಒತ್ತಡದ ಯಾವುದೇ ಸನ್ನಿವೇಶಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಕಾಡಿನಲ್ಲಿ ಬದುಕುವ ಕಾಡು ಕೋಣಗಳು ಹಾಗೂ ಕರಾವಳಿ ಜಿಲ್ಲೆಯ ಸಾಕು ಪ್ರಾಣಿ ಕೋಣಗಳಿಗೆ ಹೋಲಿಸಿರುವುದು ದುರದೃಷ್ಟಕರ ಮತ್ತು ಆಘಾತಕಾರಿಯಾಗಿದೆ ಎಂದರು.
ಪೇಟಾ ಸಂಸ್ಥೆಯ ಸದಸ್ಯ ಮಣಿಲಾಲ್ ಅಮಾನವೀಯವಾಗಿ ಕೋಣಗಳನ್ನು ವಧಿಸುವ ದಿಲ್ಲಿಯ ಖಾಸಯಿಖಾನೆಯ ಸದಸ್ಯನಾಗಿದ್ದಾರೆ. ಅವರು ಕರಾವಳಿ ಜಿಲ್ಲೆ ಜನಪ್ರಿಯ ಕ್ರೀಡೆಯಾದ ಕಂಬಳ ಪ್ರಾಣಿ ಹಿಂಸೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಹಾಸ್ಯಸ್ಪದವಾಗಿದೆ ಎಂದ ಅವರು, ಕಂಬಳವನ್ನು ಉಳಿಸುವಂತೆ ಕೇಂದ್ರ ಹಾಗೂ ಕರ್ನಾಟಕ ಸರಕಾರವನ್ನು ಒತ್ತಾಯಿಸಿ ಅವಿಭಜಿತ ಜಿಲ್ಲೆಯ ಸುಳ್ಯದಿಂದ ಬೈಂದೂರು ವರೆಗೆ 300ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು ಕೈಗೊಂಡ ನಿರ್ಣಯಗಳ ಪ್ರತಿಗಳುಳ್ಳ ’ಕಂಬಳ ಉತ್ಸವ’ ಎಂಬ ಹೊತ್ತಗೆಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ಇದರ ಕನ್ನಡ ಪ್ರತಿಯನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಇಂಗ್ಲೀಷ್ ಪ್ರತಿಯನ್ನು ಮಂಗಳೂರಿಗೆ ಆಗಮಿಸುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಅವರಿಗೆ ಸಲ್ಲಿಸಲಾಗುವುದು ಎಂದರು.
ಜನವರಿ 30ರಂದು ಹೈಕೋರ್ಟ್‌ನಲ್ಲಿ ಕಂಬಳದ ಪರವಾಗಿ ತೀರ್ಪು ಬರುವ ಆಶಯವನ್ನು ವ್ಯಕ್ತಪಡಿಸಿದ ಎಡ್ತೂರು ರಾಜೀವ ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿ, ವ್ಯತಿರಿಕ್ತ ತೀರ್ಪು ಬಂದಲ್ಲಿ ಸುಗ್ರೀವಾಜ್ಞೆ ತಂದಾದರೂ ಕಂಬಳ ನಿಷೇಧ ರದ್ದುಗೊಳಿಸುವುದಾಗಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಈಗಾಗಲೇ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕಂಬಳ ಕ್ಷೇತ್ರದ ಪ್ರಮುಖರಾದ ವಲೇರಿಯನ್ ಅಪ್ಪು ಡೇಸಾ, ಭಕ್ತಕುಮಾರ ಶೆಟ್ಟಿ, ಕ್ಲಾಡಿ ಡಿಸೋಜ, ಕೃಷ್ಣಾಪುರ ಪರಮೇಶ್ವರ ಸಾಲಿಯಾನ್, ನಿರಂಜನ ರೈ ಮಠಂತಬೆಟ್ಟು, ಅವಿಲ್ ಮಿನೇಜಸ್, ಸತೀಶ್ಚಂದ್ರ ಸಾಲಿಯಾನ್, ಬಾಲಕೃಷ್ಣ ಅಂಚನ್, ನವೀನ್ ಚಂದ್ರ ಆಳ್ವ ತಿರುವೈಲುಗುತ್ತು, ವಿವೇಕ್ ಪುರಸಬಾ ಸದಸ್ಯ ಸದಾಶಿವ ಬಂಗೇರ ಮೊದಲಾದವರು ಉಪಸ್ಥಿತರಿದ್ದರು







