ಜೈಲು ಪರಾರಿ ಯತ್ನ ವಿಫಲ: ಓರ್ವ ಸಾವು, ಜೈಲರ್ ಸೇರಿದಂತೆ 13 ಮಂದಿಗೆ ಗಾಯ

ಪಣಜಿ,ಜ.25: ಗೋವಾದ ಸದಾ ಸಬ್ ಜೈಲಿನಲ್ಲಿ ಅಧಿಕಾರಿಗಳು ಹಾಗೂ ಇತರ ಕೈದಿಗಳನ್ನು ಒತ್ತೆಯಾಳಾಗಿರಿಸಿಕೊಂಡು ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ ಕೈದಿಗಳ ಯತ್ನ ವಿಫಲವಾಗಿದ್ದು, ಘಟನೆಯಲ್ಲಿ ಓರ್ವ ಕೈದಿ ಮೃತಪಟ್ಟು ಜೈಲರ್ ಸೇರಿದಂತೆ 13 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ವಿನಾಯಕ್ ಕೊರ್ಬಾತ್ಕರ್ ಘಟನೆಯಲ್ಲಿ ಮೃತಪಟ್ಟ ಕೈದಿ. ಕಳೆದ ವರ್ಷದ ಜುಲೈನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯ ಜೈಲಿನಿಂದ ಗೋವಾದ ವಾಸ್ಕೋ ಟೌನ್ ನಲ್ಲಿರುವ ಸದಾ ಸಬ್ ಜೈಲಿಗೆ ವರ್ಗಾಯಿಸಲಾಗಿತ್ತು. ಮಾಡಲಾಗಿತ್ತು.
ಮಂಗಳವಾರ ರಾತ್ರಿ 49 ಕೈದಿಗಳು ಜೈಲಿನಿಂದ ಪರಾರಿಯಾಗುವ ಉದ್ದೇಶದೊಂದಿಗೆ ಇಡೀ ಜೈಲನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನ ನಡೆಸಿದ್ದಾರೆ.ಕೈದಿಗಳು, ಜೈಲರ್ ಹಾಗೂ ಅಧಿಕಾರಿಗಳನ್ನು ಒತ್ತೆಯಾಳಾಗಿರಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.ಜೈಲರ್ ವಿಟ್ಠಲ್ ಗವಾಸ್, ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿದಂತೆ 9 ಮಂದಿ ಕೈದಿಗಳು ಗಾಯಗೊಂಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೈಲಿನಿಂದ ಪರಾರಿಯಾಗುವ ಕೈದಿಗಳ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.





