ಶೇ.100 ಕ್ಯಾಶ್‌ಲೆಸ್ ಗುರಿ: ಸಚಿವ ಜಿಗಜಿಣಗಿ
ಡಿಜಿಧನ್ ಮೇಳ: ಪ್ರಾತ್ಯಕ್ಷಿಕೆ ಮಳಿಗೆ ಉದ್ಘಾಟನೆ

ಮಂಗಳೂರು, ಜ.25: ಡಿಜಿಟಲ್ ಪಾವತಿ ಹಾಗೂ ನಗದು ರಹಿತ ವ್ಯವಹಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರಕಾರದ ನೀತಿ ಆಯೋಗದ ಡಿಜಿಧನ್ ಮೇಳದ ಅಂಗವಾಗಿ ನಗರದ ಪುರಭವನದ ಮುಂಭಾಗ ಬುಧವಾರ ಆಯೋಜಿಸಲಾದ ನಗದು ರಹಿತ ವ್ಯವಹಾರಗಳ ಪ್ರಾತ್ಯಕ್ಷಿಕೆಯ ಮಳಿಗೆಗಳನ್ನು ಕೇಂದ್ರ ಕುಡಿಯುವ ನೀರು ಸರಬರಾಜು ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರತಿ ಹಳ್ಳಿಯಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡುವುದು ಸರಕಾರದ ಉದ್ದೇಶವಾಗಿದೆ. ನಗದು ರಹಿತ ವ್ಯವಹಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಕೇಂದ್ರದ ಯೋಜನೆಯನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ಹೆಚ್ಚು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡುವ ಪ್ರಯತ್ನ ಮುಂದುವರಿದಿದೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಇದು ಪರಿಣಾಮಕಾರಿಯಾಗಿ ಅಳವಡಿಕೆಯಾಗಿದೆ. ರಾಜ್ಯದ ಪ್ರತಿ ಹಳ್ಳಿಯನ್ನು ಆಯ್ಕೆ ಮಾಡಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.
ಡಿಜಿಧನ್ ಮೇಳದಲ್ಲಿ 12 ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ, ತೈಲ ಕಂಪೆನಿಗಳು, ಸಾರ್ವಜನಿಕ ಉದ್ದಿಮೆಗಳು, ಬಿಎಸ್‌ಎನ್‌ಎಲ್, ಅಂಚೆ ಇಲಾಖೆ, ಮೊಬೈಲ್ ಸಂಸ್ಥೆಗಳು ಸೇರಿದಂತೆ ಒಟ್ಟು 36 ಪ್ರದರ್ಶನಾ ಮಳಿಗೆಗಳು ಭಾಗವಹಿಸಿದ್ದವು.







