ಟ್ರಂಪ್ ಆಳ್ವಿಕೆಯ ಐದೇ ದಿನಗಳಲ್ಲಿ 6 ಪತ್ರಕರ್ತರ ಬಂಧನ
ವಾಶಿಂಗ್ಟನ್, ಜ. 25: ಅಮೆರಿಕದ ಮಾಧ್ಯಮ ವಿರೋಧಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ಐದು ದಿನಗಳಾದವು ಅಷ್ಟೆ. ಅದಾಗಲೇ ವಾಶಿಂಗ್ಟನ್ ಡಿಸಿ ಪೊಲೀಸರು, ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ನಡೆದ ಪ್ರತಿಭಟನೆಗಳನ್ನು ವರದಿ ಮಾಡಿದ ಆರು ಪತ್ರಕರ್ತರ ವಿರುದ್ಧ ಗುರುತರ ಆರೋಪದ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.
ಈ ಪತ್ರಕರ್ತರ ಅಪರಾಧಗಳು ಸಾಬೀತಾದರೆ ಅವರು 10 ವರ್ಷದ ಜೈಲು ಶಿಕ್ಷೆ ಅನುಭವಿಸಬಹುದಾಗಿದೆ ಹಾಗೂ ಅವರಿಗೆ 25,000 ಡಾಲರ್ (ಸುಮಾರು 17 ಲಕ್ಷ ರೂಪಾಯಿ) ದಂಡವನ್ನೂ ವಿಧಿಸಬಹುದಾಗಿದೆ.
ಅಮೆರಿಕದ 45ನೆ ಅಧ್ಯಕ್ಷರಾಗಿ ಟ್ರಂಪ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ, ಅಮೆರಿಕದ ರಾಜಧಾನಿಯಲ್ಲಿ ನಡೆದ ಹಿಂಸಾತ್ಮಕ ಟ್ರಂಪ್ ವಿರೋಧಿ ಪ್ರತಿಭಟನೆಗಳ ಬಗ್ಗೆ ಪತ್ರಕರ್ತರು ವರದಿ ಮಾಡಿದ್ದರು. ವಾಶಿಂಗ್ಟನ್ ಡಿಸಿಯ ಅತ್ಯಂತ ಕಠಿಣ ಗಲಭೆ ವಿರೋಧಿ ಕಾನೂನುಗಳ ಅನ್ವಯ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಆರು ಪತ್ರಕರ್ತರು ಶನಿವಾರ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಅವರ ವಿರುದ್ಧದ ಮೊಕದ್ದಮೆಗಳ ವಿಚಾರಣೆ ಫೆಬ್ರವರಿ ಮತ್ತು ಮಾರ್ಚ್‌ಗಳಲ್ಲಿ ನಡೆಯಲಿವೆ.
ಈ ಪತ್ರಕರ್ತರ ಪೈಕಿ ಯಾರ ವಿರುದ್ಧವೂ ವೈಯಕ್ತಿಕ ದೂರು ದಾಖಲಾಗಿಲ್ಲ ಹಾಗೂ ಅವರು ಏನು ಅಪರಾಧ ಮಾಡಿದ್ದಾರೆ ಎಂಬುದನ್ನೂ ತಿಳಿಸಲಾಗಿಲ್ಲ ಎಂದು ‘ಗಾರ್ಡಿಯನ್’ ವರದಿ ಮಾಡಿದೆ.
ಬಂಧಿತರಲ್ಲಿ ಓರ್ವ ಸಾಕ್ಷಚಿತ್ರ ನಿರ್ಮಾಪಕ, ಓರ್ವ ಪತ್ರಿಕಾ ಛಾಯಾಗ್ರಾಹಕ, ಓರ್ವ ಲೈವ್ ಸ್ಟ್ರೀಮರ್, ಓರ್ವ ಫ್ರೀಲಾನ್ಸ್ (ಸ್ವತಂತ್ರ) ವರದಿಗಾರ, ಓರ್ವ ಸುದ್ದಿ ವೆಬ್‌ಸೈಟೊಂದರ ವರದಿಗಾರ ಮತ್ತು ‘ರಶ್ಯ ಟುಡೆ’ ಪತ್ರಿಕೆಯ ಪತ್ರಕರ್ತರಿದ್ದಾರೆ.
‘‘ಈ ಆರೋಪಗಳು ತಪ್ಪು ಎನ್ನುವುದು ಸ್ಪಷ್ಟ. ಮುಂದೆ ಪ್ರತಿಭಟನೆಗಳನ್ನು ವರದಿ ಮಾಡುವ ಪತ್ರಕರ್ತರಿಗೆ ಇದು ಎಚ್ಚರಿಕೆಯ ಸಂದೇಶವೊಂದನ್ನು ಕಳುಹಿಸಬಹುದು ಎಂಬ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಈ ಆರೋಪಗಳನ್ನು ತಕ್ಷಣ ತೆಗೆದು ಹಾಕಿ ಎಂಬುದಾಗಿ ನಾವು ವಾಶಿಂಗ್ಟನ್‌ನ ಅಧಿಕಾರಿಗಳಿಗೆ ಕರೆನೀಡುತ್ತೇವೆ’’ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಎಂಬ ಸ್ವತಂತ್ರ ಹಾಗೂ ಲಾಭರಹಿತ ಸಂಸ್ಥೆ ಹೇಳಿದೆ.







