ಪುತ್ತೂರು : ರಾಷ್ಟ್ರೀಯ ಮತದಾರರ ದಿನಾಚರಣೆ

ಪುತ್ತೂರು, ಜ.25 : ಪ್ರಜಾಪ್ರಭುತ್ವವು ದೇಶದ ಪರಮೋಚ್ಚ ಧರ್ಮವಾಗಿದ್ದು, ಚುನಾವಣೆ ಅದರ ಪ್ರಮುಖ ಭಾಗವಾಗಿದೆ. ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವುದು ದೇಶಕ್ಕೆ ಬಗೆಯುವ ದ್ರೋಹ ಎಂದು ಸವಣೂರು ಸರ್ಕಾರಿ ಕಾಲೇಜ್‌ನ ಪ್ರಾಂಶುಪಾಲ ಪ್ರೊ. ಬಿ.ವಿ. ಸೂರ್ಯನಾರಾಯಣ ಹೇಳಿದರು.
ಅವರು ಪುತ್ತೂರಿನ ಪುರಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪ್ರತಿಯೊಬ್ಬರಿಗೂ ಖಾಸಗಿ ಧರ್ಮಗಳಿವೆ. ಅದರ ಹಬ್ಬಗಳನ್ನು ಆಯಾ ಧರ್ಮದವರು ಬಹಳ ಸಡಗರದಿಂದ ಆಚರಿಸುತ್ತಾರೆ. ಅದರಂತೆ ದೇಶದ ಧರ್ಮವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬ ಚುನಾವಣೆಯಾಗಿದೆ. ಅದಕ್ಕೆ ಪೂರಕವಾಗಿ ಮತದಾರರ ದಿನಾಚರಣೆಯನ್ನು ಹಬ್ಬವಾಗಿ ಆಚರಿಸುವಂತಾಗಬೇಕು ಎಂದರು.
ದೇಶದ ಏಳಿಗೆ ಮತ್ತು ಆಡಳಿತ ವ್ಯವಸ್ಥೆ ಚುರುಕುಗೊಳ್ಳಲು ಯುವ ಜನಾಂಗದ ಪಾಲುದಾರಿಕೆ ಮಹತ್ತರವಾಗಿದ್ದು, ದೇಶದಲ್ಲಿ ಶೇ.60ಕ್ಕೂ ಅಧಿಕ ಯುವಕರಿದ್ದಾರೆ. ಶೇ. 64 ಯುವ ಮತದಾರರಿದ್ದಾರೆ. ಆದರೆ ಚುನಾವಣೆಯಲ್ಲಿ ಶೇ.50 ಮಂದಿ ಮಾತ್ರ ಮತಚಲಾವಣೆ ಮಾಡುತ್ತಿದ್ದಾರೆ. ಉಳಿದವರು ಚುನಾವಣೆಯ ಪ್ರಕ್ರಿಯೆಲ್ಲಿ ಪಾಲ್ಗೊಳ್ಳದಿರುವುದು ಆತಂಕದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ತಾನೋರ್ವ ಮತದಾರ ಎಂಬ ಅಭಿಮಾನ ರೂಪಿಸುವುದೇ ಮತದಾರರ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಮತದಾನದ ಅರಿವಿದೆ. ಅವರು ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರೆ ವಿದ್ಯಾವಂತ ಯುವಕರು ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಹೀಗಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಚುನಾವಣೆಯನ್ನು ಪಂದ್ಯಾಟವಾಗಿ ಪರಿಗಣಿಸದೆ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಸ್ವಚ್ಚ ಜನಪ್ರತಿನಿಧಿಯನ್ನು ಆರಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು 18-19 ವರ್ಷಗಳ ಪ್ರಾಯದ ಯುವಕರನ್ನು ಗುರಿಯಾಗಿರಿಸಿ ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರಾಯದಲ್ಲಿ ಸಮಾಜಕ್ಕಾಗಿ ನಿರ್ಧಾರ ಕೈಗೊಳ್ಳುವ ಉತ್ತಮ ಅವಕಾಶ ಇದಾಗಿದ್ದು, ಪ್ರತಿಯೊಬ್ಬರೂ ಮತದಾನದ ಪವಿತ್ರತೆಯನ್ನು ಅರಿತು ಜಾಗೃತರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ಹಾಗೂ ಮತದಾರರ ದಿನಾಚರಣೆಯ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾದ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ತಹಸೀಲ್ದಾರ್ ಅನಂತಶಂಕರ್, ಪುತ್ತೂರು ಮಹಿಳಾ ಕಾಲೇಜ್‌ನ ಪ್ರಾಂಶುಪಾಲ ಝೇವಿಯರ್ ಡಿ’ಸೋಜ ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ಶ್ರೀಧರ್ ಪಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.







