ಕಂಬಳವನ್ನು ರಾಜ್ಯದ ಜಾನಪದ ಕ್ರೀಡೆಯೆಂದು ಅಧಿಕೃತವಾಗಿ ಘೋಷಿಸಿ : ಅಶ್ವಿನ್ ಜೆ.ಪಿರೇರಾ ಆಗ್ರಹ
ಜ. 26ರಿಂದ ಮೂಡುಬಿದಿರೆಯಲ್ಲಿ "ಕಂಬಳ ಉಳಿಸಿ ಅಭಿಯಾನ"

ಮೂಡುಬಿದಿರೆ , ಜ.25 : ಕಂಬಳವು ಹಲವಾರು ಶತಮಾನಗಳ ಇತಿಹಾಸವುಳ್ಳ ರೈತಾಪಿ ವರ್ಗ ಮತ್ತು ಜನಸಾಮಾನ್ಯರ, ಅದರಲ್ಲಿಯೂ ತುಳುನಾಡಿನ ಎಲ್ಲಾ ವರ್ಗದ ಜನರ ಅಚ್ಚುಮೆಚ್ಚಿನ ಜಾನಪದ ಹಾಗೂ ಸಾಂಸ್ಕೃತಿಕ ಕ್ರೀಡೆ. ಕೇಂದ್ರ ಸರಕಾರವು ಈ ಕೂಡಲೇ ಸುಗ್ರೀವಾಜ್ಞೆಯನ್ನು ಹೊರಡಿಸಿ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುರ್ತು ಸಚಿವ ಸಂಪುಟದ ಸಭೆ ಕರೆದು ಕಂಬಳವನ್ನು ಕರ್ನಾಟಕ ರಾಜ್ಯದ ಜಾನಪದ ಕ್ರೀಡೆಯೆಂದು ಅಧಿಕೃತವಾಗಿ ಘೋಷಿಸಬೇಕು ಎಂದು ಜೆಡಿಎಸ್ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ವಿನ್ ಜೆ.ಪಿರೇರಾ ಆಗ್ರಹಿಸಿದ್ದಾರೆ.
ಅವರು ಬುಧವಾರದಂದು ಮೂಡುಬಿದಿರೆ ಜೆಡಿಎಸ್ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ತಲೆಲಾಂತರಗಳಿಂದ ನಡೆದು ಬಂದ ಕಂಬಳ ಕ್ರೀಡೆಯು ಎಲ್ಲಾ ಜಾತಿ ಮತ ವರ್ಗಗಳ ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಕಂಬಳದಂತಹ ಕ್ರೀಡೆ ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ತಮ್ಮ ಹಿರಿಯರು ಕೋಣಗಳನ್ನು ಸಾಕಿ ಕೃಷಿ ಮಾಡಿರುವ ಬಗ್ಗೆ ಇತಿಹಾಸದ ಪುಸ್ತಕ ಅಥವಾ ಗೂಗಲ್‌ನಲ್ಲಿ ಮಾತ್ರ ಓದುವಂತಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು , ಪ್ರಾಣಿ ಹಿಂಸೆಯ ನೆಪದಲ್ಲಿ ಕಂಬಳವನ್ನು ನಿಷೇಧಿಸುತ್ತಿರುವುದು ಸರಿಯಲ್ಲ ಎಂದರು.
ರಾಜಕೀಯೇತರವಾಗಿ ಕಂಬಳವನ್ನು ನಡೆಸುವಂತಾಗಬೇಕು ಮತ್ತು ಜಿಲ್ಲಾಡಳಿತ ಎಲ್ಲಾ ಕಂಬಳಗಳ ಉಸ್ತುವಾರಿಯನ್ನು ವಹಿಸಬೇಕು. ಈಗಾಗಲೇ ಸರಕಾರ ಹಲವು ಅನುದಾನಗಳನ್ನು ಕಂಬಳ ಕ್ರೀಡೆಗೆ ನೀಡಿದ್ದು , ಇನ್ನೂ ಹೆಚ್ಚಿನ ಅನುದಾನವನ್ನು ನೀಡಿ ಕಂಬಳವನ್ನು ವಿಶ್ವಮಟ್ಟದಲ್ಲೂ ಹೆಸರಾಗುವ ಕ್ರೀಡೆಯನ್ನಾಗಿ ಬೆಳೆಸಲು ಪ್ರೋತ್ಸಾಹಿಸಬೇಕು. ರಾಜ್ಯದ ಎಲ್ಲಾ ವರ್ಗದ ಜನರು, ಸಂಘ ಸಂಸ್ಥೆಗಳು ಕಂಬಳ ಉಳಿಸಿ ಅಭಿಯಾನದಲ್ಲಿ ಭಾಗಿಯಾಗಬೇಕು. ಮತ್ತು ಇದೊಂದು ರಾಜಕೀಯೇತರವಾದ ಕ್ರಾಂತಿಕಾರಿ ಹೋರಾಟವಾಗಬೇಕು. ಜಿಲ್ಲೆಯಾದ್ಯಂತದ ವಿದ್ಯಾರ್ಥಿ ಸಮೂಹ ರೈತರ ಬಗ್ಗೆ ಮತ್ತು ಜಾನಪದ ಕ್ರೀಡೆಯ ಬಗ್ಗೆ ಒಲವು ತೋರಿಸಬೇಕು ಮತ್ತು ಜ.28ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನಾ ಕಂಬಳಕ್ಕೆ ಸ್ವಯಂಪ್ರೇರಿತವಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ತುಳುನಾಡಿನ ಶಕ್ತಿಯನ್ನು ಸರಕಾರಕ್ಕೆ ತೋರಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಂಬಳ ಮತ್ತು ಕೋಳಿ ಅಂಕಕ್ಕೆ ಅವಕಾಶ ನೀಡಿ :
ಹಿಂದೆ ಕೃಷಿ ಮಾಡುವಲ್ಲಿ ಎಲ್ಲಾ ಕಡೆಗಳಲ್ಲಿಯೂ ಕಂಬಳವನ್ನು ಮಾಡುತ್ತಿದ್ದರು. ತದ ನಂತರ ಕೂಲಿಯಾಳುಗಳ ಮತ್ತು ಜಾಗದ ಸಮಸ್ಯೆಗಳಿಂದಾಗಿ ಕೆಲವು ಕಡೆಗಳಲ್ಲಿ ಮಾತ್ರ ಕಂಬಳಗಳು ನಡೆಯುತ್ತಿವೆ . ಆದರೆ ಜಲ್ಲಿಕಟ್ಟಿನಲ್ಲಿ ನಡೆಯುವ ಸಾವು ನೋವುಗಳು ಕಂಬಳದಲ್ಲಿ ಸಂಭವಿಸುವುದಿಲ್ಲದಿರುವುದರಿಂದ ಕಂಬಳ ಮತ್ತು ಕೋಳಿ ಅಂಕಕ್ಕೆ ಆಕ್ಷೇಪ ಯಾಕೆ ? ಕುದುರೆ ರೇಸ್, ಕ್ರಿಕೆಟ್ ಜೂಜು ಅಲ್ಲವೆ ಇವುಗಳನ್ನು ಯಾಕೆ ನಿಷೇಧಿಸುವುದಿಲ್ಲ ಎಂದು ಪ್ರಶ್ನಿಸಿದ ಜೆಡಿಎಸ್‌ನ ಉಪಾಧ್ಯಕ್ಷ ಕೆ.ಅಮರನಾಥ ಶೆಟ್ಟಿ ತುಳುನಾಡಿನ ಜಾನಪದ ಕ್ರೀಡೆಗಳಾದ ಕಂಬಳ ಮತ್ತು ಕೋಳಿ ಅಂಕಕ್ಕೆ ಅವಕಾಸ ಮಾಡಿಕೊಡಿ ಎಂದು ಆಗ್ರಹಿಸಿದರು.
ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಹರಿಪ್ರಸಾದ್ ಶೆಟ್ಟಿ, ಮುಖಂಡರುಗಳಾದ ಜೆರಾಲ್ಡ್ ಮೆಂಡಿಸ್ ಮತ್ತು ಕಿಶೋರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







