ಭಾರತ-ಯುಎಇ ನಡುವೆ 14 ಒಪ್ಪಂದಗಳಿಗೆ ಅಂಕಿತ

ಹೊಸದಿಲ್ಲಿ,ಜ.25: ತಮ್ಮ ನಡುವಿನ ವ್ಯೆಹಾತ್ಮಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿ ಸುವ ಪ್ರಯತ್ನವಾಗಿ ಭಾರತ ಮತ್ತು ಸಂಯುಕ್ತ ಅರಬ್ ಗಣರಾಜ್ಯಗಳು(ಯುಎಇ) ರಕ್ಷಣೆ,ಭದ್ರತೆ,ವ್ಯಾಪಾರ ಮತ್ತು ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ 13 ಒಪ್ಪಂದಗಳಿಗೆ ಬುಧವಾರ ಸಹಿ ಹಾಕಿವೆ. ಜೊತೆಗೆ ಸಮಗ್ರ ವ್ಯೆಹಾತ್ಮಕ ಪಾಲುದಾರಿಕೆ ಒಪ್ಪಂದವೂ ಉಭಯ ರಾಷ್ಟ್ರಗಳ ನಡುವೆ ಮೂಡಿಬಂದಿದೆ.
ಆದರೆ ಯುಎಇ ಬದ್ಧತೆ ವ್ಯಕ್ತಪಡಿಸಿರುವ, 75 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ನಿಧಿಗೆ ಸಂಬಂಧಿಸಿದ ಬಹು ನಿರೀಕ್ಷಿತ ಒಪ್ಪಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ನಡುವಿನ ಮಾತುಕತೆಗಳ ಬಳಿಕ ಅಂಕಿತ ಬಿದ್ದ 14 ಒಪ್ಪಂದಗಳಲ್ಲಿ ಸೇರಿಲ್ಲ.
ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಹಿರಿಯ ಉದ್ಯಮಿಗಳನ್ನೊಳಗೊಂಡ ನಿಯೋಗದೊಂದಿಗೆ ಮಂಗಳವಾರ ಭಾರತಕ್ಕೆ ಆಗಮಿಸಿರುವ ಅಲ್ ನಹ್ಯಾನ್ ಅವರು ನಾಳೆ ಗಣತಂತ್ರ ದಿನ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಲ್ ನಹ್ಯಾನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ತಮ್ಮಿಬ್ಬರ ನಡುವಿನ ಚರ್ಚೆಗಳು ಫಲಪ್ರದವಾಗಿದ್ದು, ದ್ವಿಪಕ್ಷೀಯ ಸಂಬಂಧದ ಎಲ್ಲ ಆಯಾಮಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಭದ್ರತೆ ಮತ್ತು ರಕ್ಷಣಾ ಸಹಕಾರ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಹೊಸ ಆಯಾಮಗಳನ್ನು ನೀಡಿವೆ ಎಂದ ಅವರು, ನಿಕಟ ಸಂಬಂಧಗಳು ಉಭಯ ರಾಷ್ಟ್ರಗಳಿಗೆ ಮಾತ್ರವಲ್ಲ....ನಮ್ಮ ಇಡೀ ನೆರೆಹೊರೆಗೂ ಮಹತ್ವದ್ದಾಗಿವೆ ಎಂದು ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಸಹಮತವು ಪ್ರದೇಶದ ಸ್ಥಿರತೆಗೆ ನೆರವಾಗಬಲ್ಲುದು ಮತ್ತು ಆರ್ಥಿಕ ಪಾಲುದಾರಿಕೆಯು ಪ್ರಾದೇಶಿಕ ಮತ್ತು ಜಾಗತಿಕ ಸಮೃದ್ಧಿಗೆ ನಾಂದಿ ಹಾಡಬಹುದು ಎಂದು ಹೇಳಿದ ಮೋದಿ, ಶಾಂತಿ ಮತ್ತು ಸ್ಥಿರತೆಯ ದೃಷ್ಟಿಯಿಂದ ಭಾರತ ಮತ್ತು ಯುಎಇ ಆಸಕ್ತಿ ಹೊಂದಿರುವ, ಪಶ್ಚಿಮ ಏಷ್ಯಾ ಮತ್ತು ಕೊಲ್ಲಿಯಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯಿಸಿಕೊಂಡಿದ್ದೇವೆ. ಅಫಘಾನಿಸ್ತಾನ್ ಸೇರಿದಂತೆ ನಮ್ಮ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತೂ ನಾವು ಚರ್ಚಿಸಿದ್ದೇವೆ. ಮೂಲಭೂತವಾದ ಮತ್ತು ಭೀತಿವಾದ ವಿರುದ್ಧ ಪರಸ್ಪರ ಸಹಕಾರಕ್ಕೂ ನಾವು ನಿರ್ಧರಿಸಿದ್ದೇವೆ ಎಂದರು. ಉಭಯ ರಾಷ್ಟ್ರಗಳ ನಡುವಿನ ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದು ಅವರು ಒತ್ತಿ ಹೇಳಿದರು.







