ಚಿತ್ರನಟ ನಾನಾ ಪಾಟೇಕರ್ ಮತ್ತು ಜಸ್ಟಿಸ್ ಕೆ.ಟಿ.ಶಂಕರನ್‌ಗೆ ‘ಧರ್ಮಶ್ರೀ’ ಪ್ರಶಸ್ತಿ

ಪುತ್ತೂರು , ಜ.25 : ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2016ನೇ ಸಾಲಿನ ‘ಧರ್ಮಶ್ರೀ’ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ನಟ ನಾನಾ ಪಾಟೇಕರ್ ಹಾಗೂ 2017ನೇ ಸಾಲಿನ ‘ಧರ್ಮಶ್ರೀ’ ಪ್ರಶಸ್ತಿಯನ್ನು ಜಸ್ಟಿಸ್ ಕೆ.ಟಿ.ಶಂಕರನ್ ಅವರಿಗೆ ನೀಡಲಾಗುವುದು . ಪ್ರಶಸ್ತಿ ಪ್ರದಾನ ಸಮಾರಂಭ ಫೆ.11 ಮತ್ತು 12ರಂದು ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಧರ್ಮಶ್ರೀ ಪ್ರತಿಷ್ಠಾನದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಅವರು ತಿಳಿಸಿದರು.
ಅವರು ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ರಾಮೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೆ.11ರಂದು ಸಂಜೆ ನಾನಾ ಪಟೇಕರ್ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು ಎಂದರು.
ಫೆ.12ರಂದು ಸಂಜೆ ಜಸ್ಟಿಸ್ ಕೆ.ಟಿ.ಶಂಕರನ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದಾರೆ ಅವರು ತಿಳಿಸಿದರು.
ಧರ್ಮದ ಪುನರುತ್ಥಾನ,ಭಾರತೀಯ ಸಂಸ್ಕೃತಿಯ ಪುನರುಜ್ಜೀವನ ಎಂಬ ತತ್ವಾದರ್ಶದಡಿ ಸಾಂಸ್ಕೃತಿಕ ,ಸಾಮಾಜಿಕ,ಧಾರ್ಮಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಈ ಹಿಂದೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮ ಜೋಯಿಸ್, ಎಸ್.ಎಲ್.ಭೈರಪ್ಪ, ಅಶೋಕ್ ಸಿಂಗಲ್ ,ಕೆ.ಜೆ.ಜೇಸುದಾಸ್,ಡಾ.ಬಿ.ವಿ.ಆಚಾರ್ಯ ಅವರಿಗೆ ಧರ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ವಿಶ್ವನಾಥ್ ನಾನಾ ಪಾಟೇಕರ್ ಒಬ್ಬ ಅದ್ಭುತ ಪ್ರತಿಭಾವಂತ ಭಾರತೀಯ ನಟ,ಬರಹಗಾರರಾಗಿದ್ದು, ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ, ಅತ್ಯತ್ತಮ ಪೋಷಕ ನಟ, ಅತ್ಯತ್ತಮ ಖಳ ನಟ ಪ್ರಶಸ್ತಿ ಲಭಿಸಿದೆ. ಕೆಲವು ಚಿತ್ರಗಳಲ್ಲಿ ಹಿನ್ನಲೆ ಗಾಯಕರೂ ಆಗಿರುವ ಅವರು ಅನುಭೂತಿ ಎಂಬ ದತ್ತಿ ಸಂಸ್ಥೆಯ ಮೂಲಕ ಬಿಹಾರದ ಪ್ರವಾಹ ವಿಶಾಹ ಹಳ್ಳಿಗಳ ಪುನರ್ ವಸತಿಗಾಗಿ ಹಣ ಕೊಡುಗೆ, ಮಹಾರಾಷ್ಟ್ರದ ಬರಪರಿಹಾರ ಚಟುವಟಿಕೆಗೆ ನೆರವು, ಬರ ಮತ್ತು ಕ್ಷಾಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಆರ್ಥಿಕ ನೆರವು ಮೊದಲಾದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿದ್ದು, ನಾಮ್ ಫೌಂಡೇಶನ್‌ನ ಸಂಸ್ಥಾಪಕರೂ, ಮಾಜಿ ಸೇನಾನಿಯೂ,ಚಿಂತಕರೂ ಆದ ಅವರ ಸಮಾಜಮುಖಿ ಸೇವೆಗಳನ್ನು ಗುರುತಿಸಿ ಧರ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಸ್ಟಿಸ್ ಕೆ.ಟಿ.ಶಂಕರನ್ ಅವರು ಕೇರಳದ ಪಾಳಕ್ಕಾಡ್ ಜಿಲ್ಲೆಯ ಪಟ್ಟಂಬಿ ಬಳಿಯ ತಲಶ್ಶೆರಿಯವರು. ಕೇರಳದ ಪಟ್ಟಂಬಿ ಮುನ್ಸಿಫ್-ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನ್ಯಾಯಾಧೀಶ ಸೇವೆ ಆರಂಭಿಸಿದ ಅವರು ಕೇರಳ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ,ಬಳಿಕ ಕೇರಳ ಹೈಕೋರ್ಟಿನ ಶಾಶ್ವತ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಲವ್‌ಜಿಹಾದ್, ಆರ್ಥಿಕ ಭಯೋತ್ಪಾದನೆ, ಮತೀಯ ಭಯೋತ್ಪಾದನೆ , ರಾಷ್ಟ್ರೀಯ ಭಯೋತ್ಪಾದನೆ ಇತ್ಯಾದಿ ಬಗ್ಗೆ ಹಲವು ಅವರು ನೀಡಿರುವ ತೀರ್ಪುಗಳು ಪ್ರಖ್ಯಾತಿ ಪಡೆದಿವೆ. ಅವರ ಈ ಸಮಾಜಮುಖಿ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಜಿ.ಕೆ, ಮಹಾಬಲೇಶ್ವರ ಭಟ್ ಕೊನೆತೋಟ, ಕಾರ್ಯದರ್ಶಿ ಶಿವರಾಂ ಪಿ, ಸದಸ್ಯರಾದ ವಕೀಲ ಮಹೇಶ್ ಕಜೆ, ವಕೀಲ ಶಿವಪ್ರಸಾದ್, ಶಿಕ್ಷಕ ಶಿವರಾಮ ಶರ್ಮ ಹಾಗೂ ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.







