ಜ.27ರಂದು ಸರಸ್ವತಿ ಕ್ರೆಡಿಟ್‌ನ ನವೀಕೃತ ಕಚೇರಿ ಉದ್ಘಾಟನೆ
ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ವಿಶೇಷ ಉಪನ್ಯಾಸ
ಪುತ್ತೂರು , ಜ.25 : ಪುತ್ತೂರಿನ ದರ್ಬೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯಾಚರಿಸುತ್ತಿರುವ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ದರ್ಬೆ ಶಾಖೆಯ ನವೀಕೃತ ಹವಾನಿಯಂತ್ರಿತ ಕಚೇರಿಯ ಉದ್ಘಾಟನೆ ಜ.27ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ವಿನಯಕುಮಾರ್ ಕೆ. ತಿಳಿಸಿದರು.
ಅವರು ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರೂ,ಕರ್ನಾಟಕದ ಮಾಜಿ ಲೋಕಾಯುಕ್ತರೂ ಆದ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ , ಮಾಜಿ ಶಾಸಕ ಕೆ.ರಾಮಭಟ್ , ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅಂದು ಸಂಜೆ ದರ್ಬೆ ಬೈಪಾಸ್ ಬಳಿಯ ದುಗ್ಗಮ್ಮ ದೇರಣ್ಣ ಸಭಾಭವನದಲ್ಲಿ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ‘ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಕ್ರೆಡಿಟ್ ಸೊಸೈಟಿಗಳ ಪೈಕಿ ಜಿಲ್ಲೆಯಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಸ್ತುತ ರಾಜ್ಯದ ವಿವಿಧೆಡೆಗಳಲ್ಲಿ 16 ಶಾಖೆಗಳನ್ನು ಹೊಂದಿದ್ದು, 23500 ಕ್ಕೂ ಅಧಿಕ ಸದಸ್ಯರಿದ್ದಾರೆ. ಕಳೆದ 16 ವರ್ಷಗಳಲ್ಲಿ 16 ಶಾಖೆಗಳನ್ನು ಆರಂಭಿಸಿರುವ ಸಂಸ್ಥೆಯು ಮುಂದಿನ ಎಫ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಇನ್ನೊಂದು ಶಾಖೆ ಆರಂಭಿಸಲಿದೆ. ರೂ.152 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿರುವ ಸಂಸ್ಥೆ ಕಳೆದ ವರ್ಷಾಂತ್ಯಕ್ಕೆ ರೂ.2.48 ಕೋಟಿ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ. 15 ಡಿವಿಡೆಂಟ್ ವಿತರಿಸುತ್ತಿದೆ ಎಂದು ಅವರು ತಿಳಿಸಿದರು.
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯು ವಿವಿಧ ಸೌಲಭ್ಯಗಳನ್ನು ನೀಡುವ ಜೊತೆಗೆ ಸಹಸಂಸ್ಥೆಯಾದ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮೂಲಕ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಪದ್ಮನಾಭ ಬೋರ್ಕರ್, ಅನಂತಕೃಷ್ಣ, ಪ್ರಧಾನ ವ್ಯವಸ್ಥಾಪಕ ವಸಂತ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಪಿನ್‌ಚಂದ್ರ, ಸರ್ದೇಶಕಿಯರಾದ ಅರುಣಾ ಮತ್ತು ಜಯಲಕ್ಷ್ಮಿ ಉಪಸ್ಥಿತರಿದ್ದರು







