ಮಣಿಪಾಲ: ಎಂಐಟಿ ವಜ್ರಮಹೋತ್ಸವ ಜ.27ರಂದು ಉದ್ಘಾಟನೆ

ಉಡುಪಿ, ಜ.25: ದೇಶದ ಮುಂಚೂಣಿ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಒಂದಾಗಿರುವ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸ್ಥಾಪನೆಯ 60 ವರ್ಷಗಳನ್ನು ಪೂರ್ಣಗೊಳಿಸಿದ್ದು, ಸಂಸ್ಥೆಯ ವಜ್ರಮಹೋತ್ಸವ ಸಂಭ್ರಮ ಜ.27ರಂದು ಉದ್ಘಾಟನೆಗೊಂಡು ಒಂದು ವರ್ಷ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ತಿಳಿಸಿದ್ದಾರೆ.
ಎಂಐಟಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1957ರಲ್ಲಿ ಡಾ.ಟಿಎಂಎ ಪೈ ಅವರು ಕೇವಲ 30 ವಿದ್ಯಾರ್ಥಿಗಳ ಸಿವಿಲ್ ಇಂಜಿನಿಯರಿಂಗ್ ವಿಭಾಗದೊಂದಿಗೆ ಪ್ರಾರಂಭಿಸಿದ ಈ ಕಾಲೇಜು ಇಂದು 18 ವಿಭಾಗಗಳನ್ನು ಹೊಂದಿದೆ. ಸ್ನಾತಕೋತ್ತರ ಪದವಿಯಲ್ಲಿ 25, ಎಂಎಸ್ಸಿ, ಎಂಸಿಎಯಲ್ಲಿ 4 ಹಾಗೂ ಇಂಜಿನಿಯರಿಂಗ್ ಮತ್ತು ಮೂಲ ವಿಜ್ಞಾನಗಳಲ್ಲಿ ಪಿಎಚ್‌ಡಿ ಕಲಿಕೆಗೆ ಅವಕಾಶವಿದೆ. 2160 ವಿದ್ಯಾರ್ಥಿಗಳು ಕಲಿಯುತಿದ್ದಾರೆ ಎಂದರು.
ಎಂಐಟಿಯ ವಜ್ರಮಹೋತ್ಸವ ಸಮಾರಂಭ ಜ.27ರಂದು ಸಂಜೆ 4ಗಂಟೆಗೆ ಎಂಐಟಿಯ ಕ್ವಡ್ರಾಂಗಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಮುಂಬಯಿಯ ಉದ್ಯಮಿ ಅನಂತ್ ಜೆ.ತೌಲಾಲಿಕಾರ್ ಅವರು ಮುಖ್ಯ ಅತಿಥಿಯಾಗಿರುವರು ಎಂದರು.
ಮರುದಿನ ಜ.28ರಂದು ಅಪರಾಹ್ನ 3ಗಂಟೆಗೆ ಎಂಐಟಿ ವಜ್ರಮಹೋತ್ಸವ ಉಪನ್ಯಾಸ ಸರಣಿಯನ್ನು ರಾಜ್ಯಸಭಾ ಸದಸ್ಯ, ಖ್ಯಾತ ಆರ್ಥಿಕತಜ್ಞ ಡಾ. ಸುಬ್ರಹ್ಮಣ್ಯ ಸ್ವಾಮಿ ಅವರು ಉದ್ಘಾಟಿಸಲಿದ್ದು, ‘ಭಾರತೀಯ ಆರ್ಥಿಕತೆಯ ಮೇಲೆ ನೋಟುಗಳ ಅವೌಲ್ಯೀಕರಣದ ಪ್ರಭಾವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಈ ಮಾಲಿಕೆಯಲ್ಲಿ ದೇಶದ ಖ್ಯಾತನಾಮರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುವುದು. ವಿಜ್ಞಾನ, ತಂತ್ರಜ್ಞಾನ ಹಾಗೂ ಇತರ ವಿಷಯಗಳ ಕುರಿತು ವಿಚಾರಸಂಕಿರಣ ಹಾಗೂ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಈ ಮಾಲಿಕೆಯಲ್ಲಿ ದೇಶದ ಖ್ಯಾತನಾಮರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುವುದು. ವಿಜ್ಞಾನ, ತಂತ್ರಜ್ಞಾನ ಹಾಗೂ ಇತರ ವಿಷಯಗಳ ಕುರಿತು ವಿಚಾರಸಂಕಿರಣ ಹಾಗೂ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ ಎಂದರು. ಕಾಲೇಜಿನಲ್ಲಿ ಈವರೆಗೆ ದುಡಿದ ಪ್ರಾಧ್ಯಾಪಕರು, ವಿಶ್ವದಲ್ಲಿ ಮಾನ್ಯತೆ ಪಡೆದ ಹೆಮ್ಮೆಯ ವಿದ್ಯಾರ್ಥಿಗಳಿಗೆ ಸನ್ಮಾನ, ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ ಎಂದು ಡಾ.ಪ್ರಭು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ, ಆ.ರಮೇಶ್ ಸಿ., ಡಾ.ಬಾಲಕೃಷ್ಣ ಮಡ್ಡೋಡಿ, ಡಾ.ಸಾವಂತ್ ಉಪಸ್ಥಿತರಿದ್ದರು.







