ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡಲು ಇನ್ನೊಂದು ಅವಕಾಶದ ಸಾಧ್ಯತೆ

ಹೊಸದಿಲ್ಲಿ,ಜ.25: ಜನರು ನಿರ್ದಿಷ್ಟ ಮಿತಿಗೊಳಪಟ್ಟು ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಆರ್‌ಬಿಐ ಇನ್ನೊಂದು ಅವಕಾಶವನು ನೀಡಬಹುದು ಎಂದು ಸರಕಾರಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮೂಲಗಳು ಬುಧವಾರ ತಿಳಿಸಿವೆ.
ಡಿ.30ರೊಳಗೆ ತಮ್ಮ ಬಳಿಯಿದ್ದ ಎಲ್ಲ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ವಿಫಲಗೊಂಡಿರುವ ಜನರಿಂದ ಪರಿಹಾರವನ್ನು ಕೋರಿ ಆರ್‌ಬಿಐಗೆ ಪ್ರವಾಹದೋಪಾದಿಯಲ್ಲಿ ವಿಚಾರಣೆಗಳು ಮತ್ತು ಮನವಿಗಳು ಬಂದಿವೆ ಎಂದು ಈ ಮೂಲಗಳು ಹೇಳಿವೆ
ಮಿತಿಯು 2,000 ರೂ.ಗಳಷ್ಟು ಸಣ್ಣಮೊತ್ತವಾಗಿರಬಹುದು. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ .ಇನ್ನೊಂದು ಅವಕಾಶವನ್ನು ಕಲ್ಪಿಸುವ ಬಗ್ಗೆ ನಾವು ಪರಿಶೀಲಿಸುತ್ತಿದ್ದು, ಜನರು ತಮ್ಮ ಬಳಿಯಿರುವ ಹಳೆಯ ನೋಟುಗಳನ್ನು ಕಾಯ್ದಿರಿಸಿಕೊಳ್ಳುವಂತೆ ನಮ್ಮ ಸಲಹೆ ಎಂದೂ ಅವು ತಿಳಿಸಿದವು.
ಹಲವಾರು ಜನರಿಗೆ ಈಗಲೂ ತಮ್ಮ ಬಳಿ ಹಳೆಯ ನೋಟುಗಳು ಪತ್ತೆಯಾಗುತ್ತಿವೆ. ಪುಸ್ತಕೊವೊಂದರಲ್ಲಿ ಎಂದೋ ಇಟ್ಟಿದ್ದ ಹಳೆಯ 1,000 ರೂ.ನೋಟು ಸಿಕ್ಕಿರುವ ವ್ಯಕ್ತಿಯ ವಿಚಾರಣೆಯೂ ಆರ್‌ಬಿಐಗೆ ಬಂದಿದೆ.
ಒಂದು ವೇಳೆ ನೋಟು ವಿನಿಮಯಕ್ಕೆ ಅವಕಾಶ ನೀಡಿದರೆ ದುರುಪಯೋಗವಾಗದಂತೆ ತಡೆಯಲು ಅದು ಸೀಮಿತ ಅವಧಿಯದಾಗಿರುತ್ತದೆ ಮತ್ತು ಸಣ್ಣಮೊತ್ತವನ್ನು ಮಾತ್ರ ವಿನಿಮಯಿಸಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ.
ಬ್ಯಾಂಕುಗಳಲ್ಲಿ ನೋಟುಗಳನ್ನು ಜಮಾ ಮಾಡಲು ನೀಡಲಾಗಿದ್ದ ಡಿ.30ರ ಗಡುವಿನ ಬಳಿಕ ಮಾ.31ರವರೆಗೆ ಆರ್‌ಬಿಐ ಶಾಖೆಗಳಲ್ಲಿ ಹಳೆಯ ನೋಟುಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅದಕ್ಕಾಗಿ ಸಕಾರಣವನ್ನು ನೀಡಬೇಕಿದೆ.







