ಗುರಿ,ಛಲ,ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಸಾಧ್ಯ: ಎಸ್ಪಿ.ಅಣ್ಣಾಮಲೈ

ಚಿಕ್ಕಮಗಳೂರು, ಜ.25: ಗುರಿ, ಛಲ ಮತ್ತು ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು.
ಅವರು ನಗರದ ಎಸ್.ಎಸ್.ಎಂ ಪಿಯು ಕಾಲೇಜಿನ 2016-17ನೇ ಶೈಕ್ಷಣಿಕ ವರ್ಷದ ಸಮಾರೋಪದಲ್ಲಿ ವಾರ್ಷಿಕ ಸಂಚಿಕೆ ಮಲೆನಾಡ ಮಂದಾರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಧಿಸುವ ಛಲವಿದ್ದವರಿಗೆ ಯಾವುದೇ ಶ್ರೀಮಂತಿಕೆಯ ಹಿನ್ನೆಲೆಯಾಗಲಿ, ರಾಜಕೀಯ ಹಿನ್ನೆಲೆಯಾಗಲಿ ಹಾಗೂ ಪ್ರಭಾವಿಗಳ ಹಿನ್ನೆಲೆಯಾಗಲಿ ಇರಬೇಕೆಂದಿಲ್ಲ. ತಮ್ಮ ಸ್ವಪ್ರಯತ್ನದಿಂದಲೇ ಹೆಚ್ಚಿನದನ್ನು ಸಾಧಿಸಬಹುದು. ಬರಾಕ್ ಒಬಾಮ, ಪ್ರಣವ್ ಮುಖರ್ಜಿ, ವಿರಾಟ್‌ಕೊಹ್ಲಿ ಇವರ ಕಷ್ಟಕರವಾದ ಬಾಲ್ಯದ ಬದುಕನ್ನು ತಿಳಿಸಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.
ಎಂಇಎಸ್ ಸಂಸ್ಥೆಯ ಸಹಕಾರ್ಯದರ್ಶಿ ಎಸ್. ಶಂಕರನಾರಾಯಣ ಭಟ್ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಅತ್ಯಂತ ಮಹತ್ವದ ಘಟ್ಟ. ಆದ್ದರಿಂದ ವಿದ್ಯಾರ್ಥಿಗಳು ಕಾಲಹರಣ ಮಾಡದೆ ಹೆಚ್ಚಿನ ಅಧ್ಯಯನ ಮಾಡಿ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್ ವಿಜಯ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ತಿಳಿಸಿದರು.
ಪ್ರಾಂಶುಪಾಲೆ ಶ್ರೀಮತಿ ಎಂ.ಬಿ.ಜಯಶ್ರೀ ವಾರ್ಷಿಕ ವರದಿಯನ್ನು ವಾಚಿಸಿದರು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಣಮ್ಯಾ, ಕಶ್ಯಪ್ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಶ್ರೀಮತಿ ಜಯಶ್ರೀ ಜೋಷಿ, ಕನಕರಾಜ್, ಶ್ರೀಮತಿ ಟಿ.ಶ್ರೀದೇವಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕು. ಎಂ.ಎಲ್.ಸೋನಿ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಎಚ್.ಕೆ.ಸುಭಾಷ್ ವಂದಿಸಿದರು. ಕು. ದೀಕ್ಷಾ ಜೈನ್ ಹಾಗೂ ಎಂ.ಪಿ.ನೈರುತ್ಯಾ ನಿರೂಪಿಸಿದರು.







