ಮೀಸಲಾತಿ ಪುನರ್ ಪರಿಶೀಲನೆ ಹೇಳಿಕೆ ಹಿನ್ನೆಲೆ
ಆರೆಸ್ಸೆಸ್ ನಿಷೇಧಿಸಲು ರೇಷ್ಮೆ ನಿಗಮ ಮಾಜಿ ಅಧ್ಯಕ್ಷ ಒತ್ತಾಯ
ದಾವಣಗೆರೆ, ಜ.25: ಮೀಸಲಾತಿ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಆರೆಸ್ಸೆಸ್ ಸಂಘಟನೆಯನ್ನು ಈ ಕೂಡಲೇ ಸರಕಾರ ನಿಷೇಧಿಸಬೇಕು ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ದಲಿತ ಸಮುದಾಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದ್ದಾರೆ. ಅಂತಹ ಮೀಸಲಾತಿಯನ್ನು ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್ ಭಾಗವತ್, ಮನಮೋಹನ್ ವೈದ್ಯ ಮೀಸಲಾತಿ ಪುನರ್ ಪರಿಶೀಲನೆ ಅಗತ್ಯ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವಾಡುತ್ತಿದೆ. ಇದು ಕೊನೆಗೊಳ್ಳುವವರೆಗೂ ಮೀಸಲಾತಿ ಮುಂದುವರಿಯುತ್ತದೆ. ದೇಶದಲ್ಲಿ ಶೇ.90ರಷ್ಟು ಹಳ್ಳಿಗಳಲ್ಲಿ ದಲಿತರಿಗೆ ದೇವಸ್ಥಾನ, ಕೆರೆ, ಬಾವಿಗಳಿಗೆ ಪ್ರವೇಶವಿಲ್ಲ.
ಜಾತಿ ವ್ಯವಸ್ಥೆ ಇನ್ನು ಜೀವಂತವಾಗಿದೆ. ಇಂತಹ ಸಂದಭರ್ದಲ್ಲಿ ವಿನಾಕಾರಣ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಆರೆಸ್ಸೆಸ್ ಸಂಘಟನೆ ದಲಿತರ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಧಾನ ಮಂತ್ರಿ ಮೋದಿಯವರ ಮನದಲ್ಲಿರುವ ಸ್ಥಿತಿಯನ್ನು ಆರೆಸ್ಸೆಸ್‌ನವರು ಹೇಳುತ್ತಿದ್ದಾರೆ. ಹೀಗಾಗಿ ಈ ಸಂಘಟನೆಯನ್ನು ನಿಷೇಧಿಸಬೇಕು. ಅವಕಾಶ ವಂಚಿತರಿಗೆ ಸಣ್ಣಬೆಳಕಿನ ಕಿಂಡಿಯಂತಿರುವ ಮೀಸಲಾತಿ ರದ್ದತಿ ಮಾಡಲು ಹೊರಟಿರುವ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಜನರು ತಿರಸ್ಕರಿಸಬೇಕು. ಇದರ ವಿರುದ್ಧ ದಲಿತರು, ಹಿಂದುಳಿದವರು ಹಾಗೂ ಅವಕಾಶ ವಂಚಿತ ಸಮುದಾಯಗಳು ಸಂಘಟಿತ ಹೋರಾಟ ಮಾಡಬೇಕು ಎಂದರು.
ಹಲವು ಬಿಜೆಪಿ ಮುಖಂಡರು ಅಕ್ರಮವಾಗಿ ಹಣ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳದ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸಿಎಂ ಸಿದ್ದರಾಮಯ್ಯನವರಿಗೆ ಕಾಮನ್‌ಸೆನ್ಸ್ ಇಲ್ಲವೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಕಾಮನ್‌ಸೆನ್ಸ್ ಜಾಸ್ತಿ ಇದೆ. ದ್ದರಿಂದಲೇ ಪರಪ್ಪನ ಅಗ್ರಹಾರದ ಅತಿಥಿ ಗೃಹಕ್ಕೆ 24 ದಿನಗಳ ಕಾಲ ಹೋಗಿ ಬಂದಿದ್ದಾರೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಅಲ್ಲಾವುಲ್ಲಿ ಖಾನ್, ಅಬ್ದುಲ್ ಘನಿ ಕಾಯರ್, ಶಫೀ ಅಹ್ಮದ್, ವಾಸೀನ್ ಪೀರ್ ರಜ್ಮೀರ್, ನೂರ್ ಅಹ್ಮದ್, ಬಿ. ಶಿವಕುಮಾರ್, ಜೆ. ಶ್ರೀನಿವಾಸ್ ಉಪಸ್ಥಿತರಿದ್ದರು.







