ಮಂಗಳೂರು ಭೂಗತ ತೈಲಾಗಾರವನ್ನು ಅರ್ಧ ತುಂಬಿಸಲಿರುವ ಯುಎಇ

ಹೊಸದಿಲ್ಲಿ,ಜ.25: ಕೇಂದ್ರದ ವ್ಯೆಹಾತ್ಮಕ ಮೀಸಲು ವ್ಯವಸ್ಥೆಯ ಭಾಗವಾಗಿರುವ ಮಂಗಳೂರಿನಲ್ಲಿಯ ಭೂಗತ ತೈಲ ಸಂಗ್ರಹಾಗಾರದ ಅರ್ಧದಷ್ಟನ್ನು ತುಂಬಿಸಲು ಸಂಯುಕ್ತ ಅರಬ್ ಗಣರಾಜ್ಯಕ್ಕೆ ಅವಕಾಶ ಕಲ್ಪಿಸುವ ಯುಎಇ ಜೊತೆಗಿನ ಒಪ್ಪಂದ ವೊಂದಕ್ಕೆ ಭಾರತವು ಬುಧವಾರ ಸಹಿ ಹಾಕಿದೆ.
ಯುಎಇಯ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್‌ಒಸಿ)ಯು ಮಂಗಳೂರು ಭೂಗತ ತೈಲ ಸಂಗ್ರಹಾಗಾರದಲ್ಲಿ ಸುಮಾರು ಆರು ಮಿಲಿಯ ಬ್ಯಾರೆಲ್ ತೈಲವನ್ನು ತುಂಬಿಸಲಿದೆ. ಇದು ಸಂಗ್ರಹಾಗಾರದ ಸಾಮರ್ಥ್ಯದ ಅರ್ಧದಷ್ಟಾಗುತ್ತದೆ ಎಂದು ಭಾರತೀಯ ತೈಲ ಸಚಿವಾಲಯದ ಜಂಟಿ ಕಾರ್ಯದರ್ಶಿ(ಅಂತರರಾಷ್ಟ್ರೀಯ ಸಹಕಾರ) ಸಂಜಯ್ ಸುಧೀರ್ ತಿಳಿಸಿದರು.
ತನ್ನ ಹೆಚ್ಚಿನ ತೈಲ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವು ಶಕ್ತಿ ಭದ್ರತಾ ಅಪಾಯಗಳಿಂದ ರಕ್ಷಣೆಯಾಗಿ ಭೂಗತ ಸಂಗ್ರಹಾಗಾರಗಳ ರೂಪದಲ್ಲಿ ತುರ್ತು ದಾಸ್ತಾನು ವ್ಯವಸ್ಥೆಯನ್ನು ರೂಪಿಸುತ್ತಿದೆ. ಈ ಸಂಗ್ರಹಾಗಾರಗಳಲ್ಲಿ 36.87 ಮಿಲಿಯ ಬ್ಯಾರೆಲ್ ಅಥವಾ 2016ರಲ್ಲಿನ ಸುಮಾರು 10 ದಿನಗಳ ಸರಾಸರಿ ದೈನಂದಿನ ಅಗತ್ಯದ ಕಚ್ಚಾ ತೈಲವನ್ನು ದಾಸ್ತಾನಿರಿಸಬಹುದಾಗಿದೆ.
ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ಬಳಿಕ ಮಂಗಳೂರು ಏಷ್ಯಾದಲ್ಲಿ ತನ್ನ ಮೂರನೇ ದಾಸ್ತಾನು ಸೌಕರ್ಯವಾಗಲಿದೆ. ಇದರಿಂದಾಗಿ ಆಗ್ನೇಯ ಏಷ್ಯಾದಲ್ಲಿ ಮಾರುಕಟ್ಟೆ ಬೇಡಿಕೆಗಳನ್ನು ಪೂರೈಸುವಲ್ಲಿ ತನಗೆ ಹೆಚ್ಚಿನ ಕ್ಷಮತೆ ದೊರೆಯಲಿದೆ ಎಂದು ಎಡಿಎನ್‌ಒಸಿ ತಿಳಿಸಿದೆ.







