ತನ್ನನ್ನು ಅವಮಾನಿಸಿದ್ದ ರಾಜಕಾರಣಿ ವಿರುದ್ಧವೇ ಕಣಕ್ಕಿಳಿದ ನಿವೃತ್ತ ಪೊಲೀಸ್
ಮೀರತ್,ಜ.25: ಹೆಚ್ಚಿನ ರಾಜಕಾರಣಿಗಳು ಹೆಸರು,ಪ್ರಸಿದ್ಧಿ ಮತ್ತು ಅಧಿಕಾರಕ್ಕಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ. ಆದರೆ ಇಲ್ಲೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಛಗನ್ ಸಿಂಗ್ ಸಾವಿರಾರು ಪೊಲೀಸರು ಮತ್ತು ಅವರ ಖಾಕಿ ಸಮವಸ್ತ್ರದ ಗೌರವವನ್ನು ರಕ್ಷಿಸಲು ಚುನಾವಣಾ ಕಣಕ್ಕಿಳಿದಿದ್ದಾರೆ. ಆರು ವರ್ಷಗಳ ಹಿಂದೆ ತಾನು ಕರ್ತವ್ಯ ನಿರ್ವಹಿಸು ತ್ತಿದ್ದಾಗ ತನ್ನನ್ನು ಅವಹೇಳನಗೈದಿದ್ದ ಬಿಎಸ್‌ಪಿ ನಾಯಕ ಯಾಕೂಬ್ ಖುರೇಷಿ ವಿರುದ್ಧ ದಕ್ಷಿಣ ಮೀರತ್ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.
ಅಂದು ಖುರೇಷಿ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಅದು ನನ್ನ ಜೀವನದ ಅತ್ಯಂತ ಕರಾಳ ದಿನವಾಗಿತ್ತು. ಆಡಳಿತ ಪಕ್ಷದ ನಾಯಕನನ್ನು ಎದುರಿಸುವ ಧೈರ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗಿರಲಿಲ್ಲ ಎಂದು ಸಿಂಗ್ ನೆನಪಿಸಿಕೊಂಡಿದ್ದಾರೆ.
ಅಂದು ‘ರವಿದಾಸ್ ಜಯಂತಿ’ ಅಂಗವಾಗಿ ಮೀರತ್‌ನಲ್ಲಿ ಮೆರವಣಿಗೆಯ ಹಿನ್ನೆಲೆಯಲ್ಲಿ ರಸ್ತೆಯೊಂದರಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಅಲ್ಲಿ ಸಿಂಗ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈವೇಳೆ ಖುರೇಷಿಯವರ ಹೊಸಕಾರು ಆ ರಸ್ತೆಯನ್ನು ಪ್ರವೇಶಿಸಿದ್ದು, ಅದನ್ನು ಸಿಂಗ್ ತಡೆದಿದ್ದರು. ಈ ಮಾಹಿತಿ ತಿಳಿದು ತನ್ನ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದಿದ್ದ ಖುರೇಷಿ ಸಿಂಗ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಸಮವಸ್ತ್ರವನ್ನು ಹರಿದು ಕಪಾಳಕ್ಕೆ ಬಾರಿಸಿದ್ದರು. ಖುರೇಷಿಯವರು ತನಗೆ ಮಾಡಿದ್ದ ಅವಹೇಳನಕ್ಕಿಂತ ಹಿರಿಯ ಪೊಲೀಸ್ ಅಧಿಕಾರಿಗಳ ವೌನ ತನಗೆ ಹೆಚ್ಚು ಆಘಾತವನ್ನುಂಟು ಮಾಡಿತ್ತು ಎನ್ನುತ್ತಾರೆ ಸಿಂಗ್.
ಪೊಲೀಸರು ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದಾಗ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿಂಗ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು ಖರೇಷಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ತನಿಖೆ ಪೂರ್ಣಗೊಳ್ಳುವವರೆಗೆ ಖುರೇಷಿ ಬಂಧನಕ್ಕೆ ಅದು ತಡೆಯಾಜ್ಞೆ ನೀಡಿದೆ. 2012ರಲ್ಲಿಯೇ ಕೆಲಸಕ್ಕೆ ರಾಜೀನಾಮೆ ನೀಡಿ ಖುರೇಷಿ ವಿರುದ್ಧ ಸ್ಪರ್ಧಿಸಲು ಸಿಂಗ್ ಮುಂದಾಗಿದ್ದರು. ಆದರೆ ರಾಜೀನಾಮೆ ಸ್ವೀಕೃತವಾಗಿಲ್ಲ ಎಂದು ಹೇಳಿ ಅಧಿಕಾರಿಗಳು ಅವರ ಯತ್ನಕ್ಕೆ ಕಲ್ಲು ಹಾಕಿದ್ದರು.





