ಪ್ರಿಯಾಂಕಾ ಗಾಂಧಿ ವಿರುದ್ಧ ಅನುಚಿತ ಹೇಳಿಕೆ ನೀಡಿದ ಬಿಜೆಪಿ ನಾಯಕ ವಿನಯ್ ಕಟಿಯಾರ್
ಹೊಸದಿಲ್ಲಿ,ಜ.25: ವಿನಯ್ ಕಟಿಯಾರ್ ಅವರು ಪ್ರಿಯಾಂಕಾ ಗಾಂಧಿಯವರ ಕುರಿತು ಲಿಂಗ ತಾರತಮ್ಯದ ಹೇಳಿಕೆಯೊಂದನ್ನು ನೀಡುವ ಮೂಲಕ ಸ್ತ್ರೀಯರ ಕುರಿತಂತೆ ತಮ್ಮ ನಾಲಿಗೆಯನ್ನು ಲಂಗುಲಗಾಮಿಲ್ಲದೆ ಹರಿಬಿಡುವ ಬಿಜೆಪಿ ನಾಯಕರ ಸಾಲಿಗೆ ಸೇರಿದ್ದಾರೆ. ಚುನಾವಣಾ ಜ್ವರದಲ್ಲಿರುವ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಕಾಂಗ್ರೆಸ್‌ನ ತಾರಾ ಪ್ರಚಾರಕಿ ಎನ್ನುವುದನ್ನು ಕಟಿಯಾರ್ ನಂಬುತ್ತಿಲ್ಲ. ‘‘ಆಕೆಗಿಂತಲೂ ಸುಂದರಿಯರಾದ ಇತರ ಪ್ರಚಾರಕಿಯರಿದ್ದಾರೆ... ಪ್ರಿಯಾಂಕಾ ಏನು ಮಹಾ?’’ ಎಂದು ಆಣಿಮುತ್ತನ್ನು ಅವರು ಉದುರಿಸಿದ್ದಾರೆ.
ಪ್ರಿಯಾಂಕಾರ ಪ್ರಚಾರದಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಟಿಯಾರ್, ಏನದು ತಾರಾ ಪ್ರಚಾರಕಿ? ಅದೊಂದು ದೊಡ್ಡ ವಿಷಯವಲ್ಲ. ಸುಂದರಿಯರಾದ ಇತರ ಪ್ರಚಾರಕಿಯರು ಎಷ್ಟೋ ಇದ್ದಾರೆ. ಸಿನೆಮಾ ಹಿರೋಯಿನ್‌ಗಳಿದ್ದಾರೆ. ಪ್ರಿಯಾಂಕಾರನ್ನು ನಿವಾಳಿಸಿ ಎಸೆಯಬಲ್ಲ ಸುಂದರಿಯರಿದ್ದಾರೆ ಎಂದು ಹೇಳಿದರು. ತಾರಾ ಪ್ರಚಾರಕಿ ಎಂದರೆ ರಾಜಕೀಯ ಚರಿಷ್ಮಾಗಿಂತ ಸೌಂದರ್ಯವೇ ಮುಖ್ಯ ಎಂದು ಕಟಿಯಾರ್ ಭಾವಿಸಿರುವುದು ಭಾರತೀಯ ಪುರುಷ ರಾಜಕಾರಣಿಗಳು ಮಹಿಳೆಯರ ಬಗ್ಗೆ ಹೊಂದಿರುವ ಲಿಂಗ ತಾರತಮ್ಯಕ್ಕೆ ಸಾಕ್ಷಿಯಾಗಿದೆ.
ಇಂದು ಬೆಳಗ್ಗೆಯಷ್ಟೇ ಜೆಡಿಯು ನಾಯಕ ಶರದ್ ಪವಾರ್ ಅವರು, ಮತದ ಗೌರವವು ಮಹಿಳೆಯ ಗೌರವಕ್ಕಿಂತ ಹೆಚ್ಚಿನದು ಎಂದು ಹೇಳಿದ್ದರು.







