ಸರ್ಜಿಕಲ್ ದಾಳಿಗಾಗಿ 22 ಯೋಧರಿಗೆ ಶೌರ್ಯ ಪ್ರಶಸ್ತಿ
ಹೊಸದಿಲ್ಲಿ,ಜ.25: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಲು ಕಳೆದ ವರ್ಷದ ಸೆ.29ರ ರಾತ್ರಿ ನಿಯಂತ್ರಣ ರೇಖೆಯನ್ನು ದಾಟಿದ್ದ 22 ಯೋಧರಿಗೆ ದೇಶದ ಕೆಲ ಅತ್ಯುನ್ನತ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರು ಅತ್ಯುತ್ಕೃಷ್ಟ 4 ಪ್ಯಾರಾ ಮತ್ತು 9 ಪ್ಯಾರಾ ಸ್ಪೆಷಲ್ ಫೋರ್ಸ್‌ಸ್ ರೆಜಿಮೆಂಟ್‌ಗೆ ಸೇರಿದ್ದಾರೆ.
4 ಪ್ಯಾರಾದ ಮೇಜರ್ ಓರ್ವರಿಗೆ ಶಾಂತಿಕಾಲದ ಎರಡನೇ ಅತ್ಯುತ್ತಮ ಪುರಸ್ಕಾರ ವಾಗಿರುವ ಕೀರ್ತಿ ಚಕ್ರವು ಲಭಿಸಿದೆ. ಮೂವರು ಅಧಿಕಾರಿಗಳು ಮತ್ತು ಇಬ್ಬರು ಯೋಧರಿಗೆ ಶಾಂತಿಕಾಲದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪ್ರಕಟಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಸರಕಾರವು ಬಿಡುಗಡೆಗೊಳಿಸಿಲ್ಲ.
ಯೋಜನೆ ಮತ್ತು ಕಾರ್ಯಾಚರಣೆಯನ್ನು ರೂಪಿಸಿದ್ದ, ಆದರೆ ಸರ್ಜಿಕಲ್ ದಾಳಿಯಲ್ಲಿ ಖುದ್ದಾಗಿ ಭಾಗವಹಿಸಿರದಿದ್ದ ಇಬ್ಬರು ಕರ್ನಲ್‌ಗಳಿಗೆ ವಿಶಿಷ್ಟ ಯುದ್ಧಕಾಲ ಸೇವೆಗಾಗಿ ಯುದ್ಧ ಸೇವಾ ಪದಕವನ್ನು ಘೋಷಿಸಲಾಗಿದೆ. ಇತರ 14 ಯೋಧರು ಸೇನಾ ಪದಕಗಳಿಗೆ ಪಾತ್ರರಾಗಿದ್ದಾರೆ. ಈ ಪೈಕಿ ಓರ್ವ ಯೋಧ ಈ ಹಿಂದೆಯೂ ಸೇನಾ ಪದಕ ಪಡೆದಿದ್ದರು.





