ಅಬುಧಾಬಿ ಯುವರಾಜನ ಮಾತು ಕೇಳಿ ಪ್ರಧಾನಿ, ಜೇಟ್ಲಿ ಕಕ್ಕಾಬಿಕ್ಕಿ!
ಹೊಸದಿಲ್ಲಿ, ಜ.25: ಇಲ್ಲಿರುವ ಹೈದರಾಬಾದ್ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅಬುಧಾಬಿ ಯುವರಾಜ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದ್ದು ಈ ವೇಳೆ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಸಭೆಯಲ್ಲಿದ್ದ ಪ್ರಮುಖರು, ಪತ್ರಕರ್ತರು ಒಂದರೆಕ್ಷಣ ತಬ್ಬಿಬ್ಬಾದರು.
ಕಾರಣ ಇಷ್ಟೇ. ಅಬುಧಾಬಿ ಯುವರಾಜ ಅರೆಬಿಕ್ ಭಾಷೆಯಲ್ಲಿ ಮಾಡಿದ ಭಾಷಣವನ್ನು ಅನುವಾದ ಮಾಡುವವರು ಅಲ್ಲಿರಲಿಲ್ಲ. ಆರಂಭದ ಮೂರು ನಿಮಿಷ ಯುವರಾಜರು ಏನು ಹೇಳುತ್ತಿದ್ದಾರೆಂದು ಅಲ್ಲಿದ್ದ ಯಾರಿಗೂ ತಲೆಬುಡ ಅರ್ಥವಾಗಲಿಲ್ಲ. ವಿತ್ತ ಸಚಿವ ಅರುಣ್ ಜೇಟ್ಲೀ ಕೈಯಲ್ಲೊಂದು ರಿಮೋಟ್ ಹಿಡಿದು, ಯುವರಾಜನ ಭಾಷಣವನ್ನು ಅನುವಾದ ಮಾಡಿ ಪ್ರಸಾರ ಮಾಡುತ್ತಿದ್ದ ಟಿವಿ ಚಾನೆಲ್‌ಗಾಗಿ ತಡಕಾಡತೊಡಗಿದರು. ಇಷ್ಟಕ್ಕೆಲ್ಲಾ ಕಾರಣ ಈ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿದ್ದ ಬಿಗಿ ಭದ್ರತಾ ವ್ಯವಸ್ಥೆ. ಅತೀ ಬಿಗಿ ಭದ್ರತೆಯ ಈ ಕಟ್ಟಡದ ಪ್ರವೇಶದ್ವಾರದಲ್ಲಿ ನಿಯೋಜಿಸಲಾಗಿದ್ದ ಹೆಚ್ಚುವರಿ ಭದ್ರತಾ ಸಿಬ್ಬಂದಿ, ಭಾಷಣ ಅನುವಾದ ಮಾಡಬೇಕಿದ್ದ ವ್ಯಕ್ತಿಯನ್ನು ಒಳಗೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಸಭೆಯಲ್ಲಿ ಯುವರಾಜರ ಭಾಷಣ ಅನುವಾದ ಮಾಡುವವ ತಾನೆಂದು ಈ ವ್ಯಕ್ತಿ ಅದೆಷ್ಟು ಪರಿಯಾಗಿ ಹೇಳಿಕೊಂಡರೂ ಭದ್ರತಾ ಸಿಬ್ಬಂದಿ ಒಪ್ಪಲಿಲ್ಲ. ಅಷ್ಟರಲ್ಲಿ ಯುವರಾಜರ ಭಾಷಣ ಆರಂಭವಾಗಿ, ಕೆಲ ಹೊತ್ತು ಗೊಂದಲದ ಪರಿಸ್ಥಿತಿಗೆ ಕಾರಣವಾಗಿತ್ತು.





